ಸಚಿವೆ ಹೆಬ್ಬಾಳ್ಕರ್  ಬಹಿರಂಗ ಕ್ಷಮೆಗೆ ; ಡಾ.ಕೋರೆ ಒತ್ತಾಯ ದಾನಿ-ಮಹಾದಾನಿಗಳಿಂದ ಕೆಎಲ್‌ಇ ಸಂಸ್ಥೆ ಬೆಳೆದಿದೆ, ಕಾಂಗ್ರೆಸ್ ನಿಂದ ಅಲ್ಲ

file6wp3gq2h2cxb1d3shwe-1584653266-247x300-1.jpg
Published on


ವಿಜಯವಾಣಿ ಸುದ್ದಿಜಾಲ ಬೆಳಗಾವಿ  
ಬೆಳಗಾವಿ: ಶತಮಾನದ ಇತಿಹಾಸ ಹೊಂದಿರುವ ಕೆಎಲ್‌ಇ ಸಂಸ್ಥೆಯು ದಾನಿ-ಮಹಾದಾನಿಗಳಿಂದ ಬೆಳೆದಿರುವುದನ್ನು ಅರಿಯದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಎಲ್‌ಇ ಸಂಸ್ಥೆಯ ಬಗ್ಗೆ ಬಾಲಿಶ ಹೇಳಿಕೆ ನೀಡಿರುವುದನ್ನು ಖಂಡಿಸಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆ  ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಮೇ 2ರಂದು  ಕೆಎಲ್‌ಇ ವಿಶ್ವವಿದ್ಯಾಲಯದಲ್ಲಿ  ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಕಾಂಗ್ರೆಸ್ ಸರ್ಕಾರ ಕೇವಲ ಒಂದು ರೂ.ಗೆ ಜಮೀನು ನೀಡಿದ ಫಲವೇ ಕೆಎಲ್‌ಇ ಆಸ್ಪತ್ರೆ ಹಾಗೂ ವಿಶ್ವವಿದ್ಯಾಲಯ ಬೆಳೆದಿದೆ’ ಎಂದು ತಪ್ಪು ಮಾಹಿತಿ ನೀಡಿರುವುದರನ್ನು  ಡಾ. ಪ್ರಭಾಕರ ಕೋರೆ ತೀವ್ರವಾಗಿ ಖಂಡಿಸಿದ್ದಾರೆ.
 ದಾನಿಗಳಿಂದ, ಮಹಾದಾನಿಗಳಿಂದ, ಸಿರಸಂಗಿ ಲಿಂಗರಾಜರು, ರಾಜಾಲಖಮಗೌಡರು, ಭೂಮರಡ್ಡಿ ಬಸಪ್ಪನವರಂಥ ತ್ಯಾಗವೀರರಿಂದ ಕೆಎಲ್‌ಇ ಸಂಸ್ಥೆ ವಿಸ್ತಾರವಾಗಿ ಬೆಳೆದು ನಿಂತಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಪ್ರಶ್ನೆಯೇ ಉದ್ಭವಿಸುವುದು ಇಲ್ಲ. ಕೆಎಲ್‌ಇ ಸಂಸ್ಥೆ ಸ್ವಂತ ಹಣದಲ್ಲಿ ಆಸ್ತಿಗಳನ್ನು ಖರೀದಿಸಿದೆ. ಆಯಾ ಕಾಲಘಟ್ಟದಲ್ಲಿದ್ದ ಪಕ್ಷಗಳಿಂದ ಸಹಾಯ,ಸಹಕಾರ ಪಡೆದಿದೆ. ಆದರೆ, ಕೇವಲ ಕಾಂಗ್ರೆಸ್‌ನಿಂದ ಕೆಎಲ್‌ಇ ಆಸ್ಪತ್ರೆ, ವಿಶ್ವವಿದ್ಯಾಲಯ ನಿರ್ಮಾಣಗೊಂಡಿವೆ ಎಂಬರ್ಥದಲ್ಲಿ ನೀಡಿರುವ ಹೇಳಿಕೆ  ದುರದೃಷ್ಟಕವಾದುದು. ಕೆಎಲ್‌ಇ ಬೆಳವಣಿಗೆಯ ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕಾಂಗ್ರೆಸ್‌ನಿಂದ ಕೆಎಲ್‌ಇ ಬೆಳೆದಿದೆ ಎಂದು ಹೇಳಿರುವದನ್ನು ಪ್ರತಿಭಟಿಸುತ್ತೇನೆ ಎಂದಿದ್ದಾರೆ.
ನಮ್ಮ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದವರು, ಬೆಂಬಲಿಸುವವರು ಇದ್ದಾರೆ. ಅದರರ್ಥ ಕೆಎಲ್‌ಇ ಸಂಸ್ಥೆಯು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿಲ್ಲ. ಶಿಕ್ಷಣ ಸಂಸ್ಥೆಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವೇ ಇಲ್ಲ. ಸಂಸ್ಥೆಯ ಬೆಳವಣಿಗೆಗಾಗಿ ಸರ್ವರ ಸಹಕಾರ ಪಡೆಯುತ್ತಾ ಬಂದಿದ್ದೇವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಈ ನೆಲದ ಶಿಕ್ಷಣ ಸಂಸ್ಥೆಗಳ ನೈಜ ಇತಿಹಾಸವನ್ನು ಅರಿತುಕೊಂಡಂತೆ ಕಾಣುವುದಿಲ್ಲ. ಇತಿಹಾಸ ಅರಿಯದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡುವುದು ಸಮಂಜಸವಲ್ಲ. ಕೆಎಲ್‌ಇ ಸಂಸ್ಥೆಯ ಇತಿಹಾಸ, ಸಾಮಾಜಿಕ ಕಳಕಳಿ ತಿಳಿದುಕೊಳ್ಳದೆ ಮತಬೇಟೆಗಾಗಿ ತಪ್ಪು ಗ್ರಹಿಕೆಯ ಹೇಳಿಕೆಗಳನ್ನು ನೀಡಿ ಜನರ ಭಾವನೆಗಳೊಂದಿಗೆ ಆಟವಾಡುವುದು ಶೋಭೆಯಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಡಾ.ಪ್ರಭಾಕರ ಕೋರೆ ಅವರು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net