

ಬೆಳಗಾವಿ:ಕರ್ನಾಟಕ ಏಕೀಕರಣಕ್ಕಾಗಿ ಅಹೋರಾತ್ರಿಯಾಗಿ ಶ್ರಮಿಸಿರುವ ಕೆಎಲ್‌ಇ ಸಂಸ್ಥೆಯು ಗಡಿಭಾಗದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ಮಾಡಿದ್ದು, ಇವತ್ತು ಬೆಳಗಾವಿಯಲ್ಲಿ ಕನ್ನಡ ಕಂಪು ವಾತಾವರಣ ಪಸರಿಸುವಂತೆ ಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ನುಡಿ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯು ಹಿಂದಿನಿಂದಲೂ ಕನ್ನಡ ಉಳಿಸಿ-ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿರುತ್ತದೆ. ಕನ್ನಡ ಸಂಸ್ಕೃತಿ, ಪರಂಪರೆಯನ್ನು ಇಂದಿನ ಯುವಜನತೆಗೆ ಪರಿಚಯಿಸುವ ಕಾರ್ಯವನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಕವಿ ಡಾ. ಡಿ.ಎಸ್. ಕರ್ಕಿ, ಡಾ. ಚಂದ್ರಶೇಖರ ಕಂಬಾರ ಅಧ್ಯಯನ ಮಾಡಿ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಸಾಹಿತಿಗಳನ್ನಾಗಿ ರೂಪಿಸಿದೆ. ಈ ಸಾಹಿತಿಗಳಿಂದ ಅನೇಕ ಪ್ರಕಾರಗಳ ಸಾಹಿತ್ಯ ಕೃಷಿಯನ್ನು ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷೆಯನ್ನು ಪ್ರೀತಿಸಬೇಕು. ನಮ್ಮ ತಾಯಿಯ ಭಾಷೆಯನ್ನು ನಾವು ಪ್ರೀತಿಸದಿದ್ದರೆ ಮತ್ತಾರು ಪ್ರೀತಿಸಲು ಸಾಧ್ಯ. ಈ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ಜನಪದ ಉತ್ಸವ ಕನ್ನಡ ಹಬ್ಬಗಳನ್ನು ಆಚರಿಸುವುದರ ಮೂಲಕ ಕನ್ನಡದ ಅಸ್ಮೀತೆಯ ಸಾಕ್ಷಿಯಾಗಿ ನಿಂತಿದೆ ಎಂದರು.