

ಬೆಳಗಾವಿ:ಜಗತ್ತಿನಲ್ಲಿ ಕ್ಯಾನ್ಸರ್ ರೋಗ ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ ಸಂಗತಿ. ಇದಕ್ಕೆ ಕಾರಣಗಳು ಹಲವಾರು. ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ಸದೃಢ ಆರೋಗ್ಯದ ಮತ್ತು ಸಕಾಲಿಕ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ ಎಂದು ರಾಷ್ಟçಪತಿ ದ್ರೌಪದಿ ಮುರ್ಮು ಅವರು ಹೇಳಿದರು.
ಕೆ ಎಲ್ ಇ ಡಾ ಸಂಪತ್‌ಕುಮಾರ ಶಿವಣಗಿ ನೂತನ ಕ್ಯಾನ್ಸರ್ ಆಸ್ಪತ್ರೆಯನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ವೈದ್ಯಕೀಯ ವೃತ್ತಿಗೆ ಅದರದೇ ಆದ ಘನತೆ ಮತ್ತು ಜವಾಬ್ದಾರಿ ಇದೆ. ವೃತ್ತಿಪರ ವೈದ್ಯರು ನಿಮ್ಮಲ್ಲಿಗೆ ಬರುವ ರೋಗಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಯಾವುದೇ ರೋಗಕ್ಕೆ ಪ್ರಾಥಮಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವದ ವೈದ್ಯರ ಮಹತ್ತರ ಜವಾಬ್ದಾರಿ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಲ್ಲ ವರ್ಗದ ಜನರಿಗೆ ಸಮರ್ಪಕ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಆಯುಷ್ ಮಾನ್ ದಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.