

ಹುಬ್ಬಳ್ಳಿ: ನಗರದ ಅಂಗಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾನಗರದ ಐ.ಎಂ.ಎಸ್.ಆರ್. ಸಭಾಂಗಣದಲ್ಲಿ ಕೆಎಲ್ಇ 109ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.
ಅತಿಥಿಯಾಗಿದ್ದ ಬೆಳಗಾವಿಯ ವಿಶ್ರಾಂತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ, ಕೆಎಲ್ಇ ಸಂಸ್ಥೆಯ ಲಾಂಛನದಲ್ಲಿರುವ ಸತ್ಯ, ಪ್ರೇಮ, ಸೇವೆ ಮತ್ತು ಸ್ವಾರ್ಥತ್ಯಾಗಗಳ ಉಸಿರೇ ನಮ್ಮ ಸಪ್ತರ್ಷಿಗಳು. ಆಗಿನ ಕಾಲದಲ್ಲಿ ಶಿಕ್ಷಣಕ್ಕಾಗಿ ಜನರು ಪುಣೆಗೆ ಹೋಗುತ್ತಿದ್ದರು.
ಅದನ್ನು ಮನಗಂಡು ಸಪ್ತಷಿರ್ಗಳು ತಮ್ಮ ಸರ್ಕಾರಿ ನೌಕರಿ ಬದಿಗೊತ್ತಿ ಶಾಲೆಯನ್ನು ಸ್ಥಾಪಿಸಿದರು. ತಮ್ಮ ಮನೆಯ ಬಂಗಾರದ ಒಡವೆಗಳನ್ನು ಮಾರಿ ಶಿಕ್ಷಣಕ್ಕಾಗಿ ಜೀವ ಮುಡಿಪಿಟ್ಟರು. ಅವರ ಪ್ರಯತ್ನದ ಫಲದಿಂದ ಈಗ ಉತ್ತರ ಕರ್ನಾಟಕದ ಜನ ವಿದ್ಯಾವಂತರಾಗಿದ್ದಾರೆ ಎಂದರು.
ಸಪ್ತರ್ಷಿಗಳು ಹಾಕಿದ ಬೀಜದಿಂದ ಕೆಎಲ್ಇ ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆದಿದೆ. ಡಾ. ಪ್ರಭಾಕರ ಕೋರೆ ಅವರು 1984ರಿಂದ 30ರಷ್ಟು ಇದ್ದ ಅಂಗ ಸಂಸ್ಥೆಗಳನ್ನು ಇಂದು 310ಕ್ಕೂ ಹೆಚ್ಚು ಮಾಡಿ ಅದ್ವೀತಿಯ ಸಾಧನೆ ಮಾಡಿದರು ಎಂದರು.
ಸಪ್ತರ್ಷಿಗಳ ಜತೆಗೆ ಮಹಾದಾನಿಗಳನ್ನು ನಾವೆಲ್ಲರೂ ನೆನೆಸಿಕೊಳ್ಳಬೇಕು. ಶಿರಸಂಗಿ ಲಿಂಗರಾಜರು, ಭೂಮರೆಡ್ಡಿ ಬಸಪ್ಪನವರು ಅಲ್ಲದೇ ಸಿದ್ದಪ್ಪ ಕಂಬಳಿಯವರ ಕೊಡುಗೆಯೂ ಅಪಾರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ, ಸಂಸ್ಥೆಯ ಹೆಸರು ಭಾರತದಾದ್ಯಂತ ಅಲ್ಲದೇ ಜಗತ್ತಿನ ತುಂಬ ಪಸರಿಸಿದೆ ಎಂದರು.
ಕಾರ್ಯಕ್ರಮ ಸಂಯೋಜಕ ಪ್ರೊ. ವೀರೇಶ ಅಂಗಡಿ ನಿರ್ವಹಿಸಿದರು. ಮಂಜುನಾಥನಗರ ಕೆಎಲ್ಇ ಇಂಗ್ಲೀಷ್ ಮಾಧ್ಯಮ ಶಾಲೆಯ ಮಕ್ಕಳು ಪ್ರಾರ್ಥನೆ ಹಾಡಿದರು. ಪ್ರೊ. ವಿ.ಆರ್. ವಾಘಮೋಡೆ ಸ್ವಾಗತಿಸಿದರು. ಪ್ರೊ. ಎಸ್.ಎಲ್. ಪಾಟೀಲ ಅತಿಥಿಗಳ ಪರಿಚಯ ಮಾಡಿದರು. ಹೇಮಾ ಜವಳಿ, ಕಾರ್ಯಕ್ರಮ ನಿರೂಪಿಸಿದರು. ಡಾ. ಡಿ.ಕೆ. ವಾಘಮೋಡೆ ವಂದಿಸಿದರು.