ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಟಿಐಇ ವಿಭಾಗವು ಉದ್ಯಮ ಕ್ಷೇತ್ರದ ಸವಾಲುಗಳಿಗೆ ತಾಂತ್ರಿಕ ಪರಿಹಾರ ಅಭಿವೃದ್ಧಿ ಪಡಿಸಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಂಶೋಧಕರಿಗೆ ಆಹ್ವಾನಿಸಿದೆ.
ಕೆಎಲ್ಇ ತಂತ್ರಜ್ಞಾನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರವು (ಸಿಟಿಐಇ) ಉತ್ತರ ಕರ್ನಾಟಕದ ದ್ವೀತಿಯ ಮತ್ತು ತೃತೀಯ ಸ್ತರದ ನಗರಗಳಿಂದ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶಿಷ್ಟವಾದ ಮೂರು ತಿಂಗಳ ಉದ್ಯಮಶೀಲತಾ ಕಾರ್ಯಕ್ರಮ ಪ್ರಾರಂಭಿಸಿದೆ.
ಐದು ಪ್ರಮುಖ ಉದ್ಯಮ ಪಾಲುದಾರರ ಸಹಕಾರದಿಂದ ಭಾಗವಹಿಸುವವರಿಗೆ ವಿವಿಧ ಕ್ಷೇತ್ರಗಳಲ್ಲಿ ತೀವ್ರವಾದ ಉದ್ಯಮ ಸಮಸ್ಯೆಗಳನ್ನು ಆಧುನಿಕ ತಾಂತ್ರಿಕ ವಿಧಾನಗಳ ಮೂಲಕ ಪರಿಹರಿಸುವ ಅವಕಾಶ ನೀಡುತ್ತದೆ.
ಭಾಗವಹಿಸುವವರಿಗೆ ಈ ಕೆಳಗಿನ ಪ್ರಮುಖ ಕ್ಷೇತ್ರಗಳಲ್ಲಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಲಾಗುತ್ತದೆ.
ಕೃಷಿ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಕೃತಕ ಬುದ್ಧಿಮತ್ತೆ/ಯಂತ್ರ ಕಲಿಕೆ, ಕಂಪ್ಯೂಟರ್ ವಿಜ್ಞಾನ, ಆಟೊಮೇಷನ್ ಮತ್ತು ರೊಬೊಟಿಕ್ಸ್, ಜೈವಿಕ ತಂತ್ರಜ್ಞಾನ.
ಈ ಕಾರ್ಯಕ್ರಮವು ನಾವೀನ್ಯತೆಯಲ್ಲಿ ಆಸಕ್ತಿ ಹೊಂದಿದ ಯುವ ಜನತೆಗೆ ವಿಶಿಷ್ಟ ವೇದಿಕೆ ಒದಗಿಸುವುದರಿಂದ ಇದರಲ್ಲಿ ಭಾಗವಹಿಸುವುದು ಮಹತ್ವದ್ದಾಗಿದೆ.
ಪ್ರಾರಂಭದಲ್ಲಿ ಕೆಎಲ್ಇ ಸಿಟಿಐಇ ಪ್ರೀ-ಇನ್ ಕ್ಯೂಬೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ನೈಜ ಜೀವನದ ಸವಾಲುಗಳ ಮೇಲೆ ಪ್ರಮುಖ ಉದ್ಯಮ ಪಾಲುದಾರರೊಂದಿಗೆ ನಿಕಟವಾಗಿ ಸಹಕಾರದ ಮೂಲಕ ಕೆಲಸ ಮಾಡುವ ಅವಕಾಶವಿದೆ.
ಆಯ್ಕೆಯಾದ ಯೋಜನೆಗಳಿಗೆ ಸಾಧ್ಯವಿರುವ ಹಣಕಾಸು ಸಹಾಯ ಒದಗಿಸುವುದು ಸೇರಿ ಹಲವು ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ.
ತಾಂತ್ರಿಕ ಸಲಹೆಗಳನ್ನು ಸಲ್ಲಿಸಲು ಮೇ 20 ಕೊನೆಯ ದಿನವಾಗಿದೆ.