

ಹುಬ್ಬಳ್ಳಿ: ತಂತ್ರಜ್ಞಾನ ಬಹಳಷ್ಟು ವೇಗವಾಗಿ ಬೆಳೆಯುತ್ತಿದೆ, ಕೃತಕ ಬುದ್ಧಿಮತ್ತೆಯನ್ನು (ಎಐ) ಅತ್ಯಂತ ವಿವೇಕಯುತವಾಗಿ ಬಳಸಿಕೊಂಡರೆ ಭಾರತದಂತಹ ಅತಿ ಹೆಚ್ಚು ಮಾನವ ಸಂಪನ್ಮೂಲ ಇರುವ ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯದರ್ಶಿ ಪ್ರೊ. ಮನೀಷ್ ಆರ್. ಜೋಶಿ ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರದ ಬಿವಿಬಿ ಆವರಣದಲ್ಲಿರುವ ಸಿ- ಲೈಟ್ ಭವನದಲ್ಲಿ ಸ್ಥಾಪಿಸಲಾಗಿರುವ ಸೆಂಟರ್ ಫಾರ್ ಆರ್ಇಫಿಶಿಯಲ್ ಇಂಟಲಿಜೆನ್ಸ್ ರೀಸರ್ಚ್ (ಸಿಎಐಆರ್) ಪ್ರಯೋಗಾಲಯವನ್ನು ಶನಿವಾರ ಉದ್ಘಾಟಿಸಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹಾಲು ಹಾಗೂ ನೀರು ಎರಡನ್ನೂ ಮಿಶ್ರಣ ಮಾಡಿ ಇಟ್ಟಾಗ ಪಕ್ಷಿಯೊಂದು ಹೇಗೆ ಹಾಲನ್ನು ಮಾತ್ರ ಆಸ್ವಾದಿಸುತ್ತದೆಯೋ ಹಾಗೇ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲಕರ ಅಂಶಗಳನ್ನು ಬಳಸಿಕೊಳ್ಳಬೇಕಾಗಿದೆ. ಜ್ಞಾನದ ಬಳಕೆಯು ಮೌಲ್ಯಾಧಾರಿತವಾಗಿರಬೇಕು. ಇಲ್ಲದಿದ್ದರೆ ಅದರಿಂದ ನಷ್ಟಗಳೂ ಇರುತ್ತವೆ ಎಂದು ಎಚ್ಚರಿಸಿದರು.
ಶೈಕ್ಷಣಿಕ ಗಡಿಯಿಂದ ಆಚೆಗೂ ಒಂದಿಷ್ಟು ಆಲೋಚನೆ ಮಾಡಬೇಕು. ಆಗಲೇ ಏನಾದರೂ ಹೊಸದು ಮಾಡಲು ಸಾಧ್ಯವಾಗುತ್ತದೆ. ತಾಂತ್ರಿಕ ಯುಗದಲ್ಲಿ ಎಲ್ಲ ಸಲಕರಣೆಗಳೂ ನಿಮ್ಮ ಕೈಯಲ್ಲಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅದರ ಮೇಲೆ ಹೊಸ ಆವಿಷ್ಕಾರಗಳನ್ನು ಮಾಡಬಹುದು. ಕೃತಕ ಬುದ್ಧಿಮತ್ತೆ ಬಳಸುವಾಗ ಅಷ್ಟೇ ಕಾಳಜಿಯೂ ಇರಬೇಕು ಎಂದು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರೊ. ಮನೀಷ್ ಜೋಶಿ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಮಾತನಾಡಿ, ವಿಶ್ವವಿದ್ಯಾಲಯದ ಆವರಣದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಯೋಗಾಲಯ ಆರಂಭಿಸಿರುವುದು ಐತಿಹಾಸಿಕ ಕ್ಷಣವಾಗಿದೆ. ಇಂತಹ ಹೊಸ ಆಲೋಚನೆ, ಕಾರ್ಯಕ್ರಮಗಳಿಗೆ ಕೆಎಲ್ಇ ಸಂಸ್ಥೆ ಸದಾ ಬೆಂಬಲ ನೀಡುತ್ತ ಬಂದಿದೆ. ಇದು ಹೀಗೆ ಮುಂದುವರಿಯಲಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ವಿವಿ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ್, ಸಂಶೋಧನೆಗಳು ಅತ್ಯಂತ ವೇಗವಾಗಿ ನಡೆಯುತ್ತಿರುವ ಈ ಕಾಲದಲ್ಲಿ ಕೃತಕ ಬುದ್ಧಿಮತ್ತೆಯು ಮತ್ತಷ್ಟು ಆವಿಷ್ಕಾರಗಳಿಗೆ ಇನ್ನೂ ವೇಗ ನೀಡಲಿದೆ. ಕೈಗಾರಿಕೆ, ಆರೋಗ್ಯ, ಶೈಕ್ಷಣಿಕ ಎಲ್ಲ ಕ್ಷೇತ್ರಗಳನ್ನು ಪುನಃ ರೂಪಿಸಲು ನೆರವಾಗಲಿದೆ. ಮುಂದಿನ ಪೀಳಿಗೆಗೂ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಡೀನ್ ಡಾ. ಮೀನಾ ಬಿ., ಎಂ.ಆರ್. ಪಾಟೀಲ, ದೇಸಾಯಿ, ಎಂ.ಎಸ್. ಕೊಲ್ಹಾರ, ಇತರರು ಇದ್ದರು.
ಕುಲಪತಿ ಡಾ. ಪ್ರಕಾಶ ತೆವರಿ ಪರಿಚಯಿಸಿದರು. ಕುಲಸಚಿವ ಡಾ. ಬಸವರಾಜ ಅನಾಮಿ ವಂದಿಸಿದರು.