

ಬೆಳಗಾವಿ : ಅಸಂಖ್ಯ ಹೋರಾಟಗಾರರು ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಅವರು ಸದಾ ಸ್ಮರಣೀಯರು. ಅವರೆಲ್ಲರನ್ನೂ ಸ್ಮರಿಸುವ ಆ.15ಕ್ಕೆ ಮಾತ್ರವಲ್ಲ ದಿನವೂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಂಗಳವಾರ 77ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಳೆದ ಎಪ್ಪತ್ತಾರು ವರ್ಷಗಳಲ್ಲಿ ಭಾರತ ಅಗಾಧವಾದ ಸಾಧನೆ ಮಾಡಿದೆ. ಜಗತ್ತು ಇಂದು ಭಾರತದತ್ತ ಹೊರಳಿ ನೋಡುವಂತೆ ವಿಕಾಸದ ಪಥದಲ್ಲಿ ಮುನ್ನಡೆದಿದೆ ಎಂದರು.
ಪರಕೀಯರ ಆಳ್ವಿಕೆಯಲ್ಲಿ ನಾವು ಬಡತನ ರೇಖೆಯ ಕೆಳಗೆ ಇದ್ದೇವು ಇಂದು ಸ್ಥಿತಿ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಭಾರತ ಪ್ರಕಾಶಿಸುತ್ತಿದೆ. ನಮ್ಮೆಲ್ಲ ಜನನಾಯಕರು ಪಕ್ಷಾತೀತವಾಗಿ ದೇಶವನ್ನು ಕಟ್ಟುವಕೆಲಸ ಮಾಡಬೇಕಾಗಿದೆ. ಇಂದು ಆರೋಗ್ಯ-ಶಿಕ್ಷಣ-ಕೃಷಿ-ಸಂಶೋಧನಾ ಕ್ಷೇತ್ರದಲ್ಲಿ ಅನನ್ಯವಾಗಿ ಸಾಧಿಸಿದ್ದೇವೆ. ಅದು ಮತ್ತಷ್ಟು ವಿಸ್ತರಿಸಬೇಕಾಗಿದೆ. ನಮ್ಮ ಯುವಜನಾಂಗದಲ್ಲಿ ದೇಶಾಭಿಮಾನವನ್ನು ಮೂಡಿಸುವ ಕೆಲಸ ನಡೆಯಬೇಕು. ದೇಶ ಮೊದಲು ಎಂಬ ಪ್ರಜ್ಞೆ, ಅಸ್ಮೀತೆ ಇಂದಿನ ಅಗತ್ಯವೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸಾಧನೆ ಮಾಡಿ, ಅ.22 ರಿಂದ ಮಧ್ಯಪ್ರದೇಶದ ಮಾವೋದಲ್ಲಿ ಜರುಗಲಿರುವ ರಾಷ್ಟ್ರಮಟ್ಟದ ಜಿ.ವಿ.ಮಾಲ್ವಂಕರ ಶೂಟಿಂಗ್ ಚಾಂಪಿಯನ್‌ಶಿಫ್‌ಗೆ ಆಯ್ಕೆಯಾದ ಸಿನಿಯರ್ ಕೆಡೆಟ್ ಪ್ರೀತಿ ಚಂದ್ರಶೇಖರಯ್ಯ ಸವದಿ ಹಾಗೂ ಸಿನಿಯರ್ ಕೆಡೆಟ್ ಗುರುನಾಥ ಲಕ್ಷ್ಮಣ ರಾಜೋಳಿ ಅವರನ್ನು ಡಾ.ಪ್ರಭಾಕರ ಕೋರೆ ಅಭಿನಂದಿಸಿದರು.
ಈತ್ತೀಚೆಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಸತತ 8ನೇ ಸಲ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡು ಲಿಂಗರಾಜ ಕಾಲೇಜಿನ ಕ್ರೀಡಾ ವಿಭಾಗದ ವಿದ್ಯಾರ್ಥಿಗಳನ್ನು, ಬೆಳಗಾವಿ, ಹುಬ್ಬಳ್ಳಿ, ಅಂಕಲಿ ಹಾಗೂ ಧಾರವಾಡ ಕೇಂದ್ರಗಳಲ್ಲಿ ಜರುಗಿದ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 4ನೇ ಸಲ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದು ವಿದ್ಯಾರ್ಥಿಗಳಿಗೆ ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್, ಎನ್‌ಎಸ್‌ಎಸ್ ಅಧಿಕಾರಿ ಡಾ.ಎಚ್.ಎಂ. ಚನ್ನಪ್ಪಗೋಳ, ಸಾಂಸ್ಕೃತಿಕ ವಿಭಾಗದ ಸಂಯೋಜಕರಾದ ಡಾ.ರೇಣುಕಾ ಕಠಾರಿ ಇತರಿದ್ದರು.