

ವಿಜಯವಾಣಿ ಸುದ್ದಿಜಾಲ ಗದಗ
ಉತ್ತರಕರ್ನಾಟಕದ ಬೆಳವಣಿಗೆಯಲ್ಲಿ ಹಾಗೂ ಜನರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುತ್ತ ಬಂದಿರುವ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪಾತ್ರದೊಡ್ಡದು ಎಂದು ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಮಹಾಂತೇಶ್ ಕವಟಗಿಮಠ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲು ಕೆಎಲ್ಇ ಸಂಸ್ಥೆ ಯಾವಾಗಲೂ ಮುಂಚೂಣಿಯಲಿರುತ್ತದೆ. ಈ ಸಾಧಕರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಉತ್ತರ ಕರ್ನಾಟಕದವರು ಉದ್ಯೋಗ ಸೃಷ್ಟಿಸುವಂತಾಗಬೇಕು. ಯುವಜನಾಂಗಕ್ಕೆ ಉದ್ಯೋಗ ನೀಡಬೇಕು. ಇಂದಿನ ಕುಟುಂಬಗಳು ಆದರ್ಶ ಕುಟುಂಬಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಮನುಷ್ಯನಿಗೆ ಅಧಿಕಾರ ಶಾಶ್ವತ ಅಲ್ಲ. ತಾವು ಮಾಡಿದ ಕೆಲಸಗಳು ಶಾಶ್ವತ. ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಬೇಕು. ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸು ಕೆಲಸವನ್ನು ಕೆಎಲ್ಇ ಮಾಡುತ್ತ ಬಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ್ ಮಾತನಾಡಿ, ಒಬ್ಬ ವ್ಯಕ್ತಿ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು. ಇಂದು ಕೆ.ಎಲ್.ಇ ಸಂಸ್ಥೆ ಬಹಳ ಸಾಧಕರನ್ನು ಹುಟ್ಟು ಹಾಕಿದೆ. ಇದರ ಯಶಸ್ಸು ಡಾ. ಪ್ರಭಾಕರ ಕೋರೆಯವರಿಗೆ ಹಾಗೂ ಆಡಳಿತ ಮಂಡಳಿಗೆ ಸಲ್ಲಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ತೋಟಂದ ಸಿದ್ದರಾಮ ಶ್ರೀಗಳು ಮಾತನಾಡಿ, ಎಸ್.ಪಿ.ಸಂಶಿಮಠ ಹಾಗೂ ಈಶಣ್ಣ ಮುನವಳ್ಳಿಯವರ ಕೊಡುಗೆ ಬಹಳ ಇದೆ. ಸಮಾಜದಲ್ಲಿ ಇನ್ನೂ ಹಲವಾರು ಉದ್ಯಮಿಗಳು ಹುಟ್ಟಿಕೊಳ್ಳಬೇಕು. ಪ್ರತಿಯೊಬ್ಬರು ಸೇವೆಯಯಲ್ಲಿ ಸಹ ತೊಡಗಿಕೊಳ್ಳಬೇಕು. ಪ್ರತಿ ವ್ಯಕ್ತಿಯೂ ಸಹ ಸೇವೆಯನ್ನು ಮಾಡಬೇಕು ಎಂದರು.
ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋಮ ಸಂಸ್ಥೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಪಿ.ಸಂಶಿಮಠ ಹಾಗೂ ಗದಗ ವಾಣಿಜ್ಯೋದ್ಯಮ ಮತ್ತ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಈಶಣ್ಣ ಮುನವಳ್ಳಿಯವರನ್ನು ಹಾಗೂ ಕಾರ್ಯದಶಿರ್ಯಾಗಿ ಆಯ್ಕೆಯಾದ ಸದಾಶಿವಯ್ಯ ಮದರಿಮಠ ಹಾಗೂ ಯುವ ಉದ್ಯಮಿ ಶರತಚಂದ್ರ ಕವಟಗಿಮಠರನ್ನು ಸನ್ಮಾನಿಸಲಾಯಿತು.
ವಿರೇಶ ಕೂಗು, ಎಸ್. ಎಸ್. ಪಟ್ಟಣಶೆಟ್ಟಿ, ಆರ್. ಟಿ. ಪವಾಡಶೆಟ್ಟರ, ತೋಂಟೇಶ ಮಾನ್ವಿ , ಪಿ. ಜಿ. ಪಾಟೀಲ, ಎಸ್. ಬಿ. ಹಾವೇರಿ, ಎ. ಕೆ. ಮಠ, ಸಂತೋಷ ಪಾಟೀಲ, ಡಾ. ರಮೇಶ ಬಿ ಸೇರಿದಂತೆ ಹಲವರು ಇದ್ದರು.