ಮಗಳ ನಾಮಕರಣಕ್ಕೆ ತಂದೆಯೇ ಇಲ್ಲ!

PH 12
Published on

ಶಹಾಬಾದ್: ಹದಿನೈದು ವರ್ಷ ಬಳಿಕ ಜನಿಸಿದ ಮಗಳ ನಾಮಕರಣ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಾದ ತಂದೆಯೇ ವಿಧಿಯಾಟಕ್ಕೆ ಬಲಿಯಾದ ಹೃದಯವಿದ್ರಾವಕ ಘಟನೆ ಭಂಕೂರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಭಂಕೂರಿನ ಈರಪ್ಪ ಮಲ್ಲೇಶಪ್ಪ ಹೂಗಾರ (40) ಮೃತಪಟ್ಟವ. ತಾಯಿ, ಪತ್ನಿ ಇದ್ದಾರೆ. ಈರಪ್ಪ-ನಾಗಮ್ಮ ದಂಪತಿಗೆ ವಿವಾಹವಾಗಿ 15 ವರ್ಷ ಮಕ್ಕಳಾಗಿರಲಿಲ್ಲ. ಎಲ್ಲ ದೇವರು, ಸಂತರಲ್ಲಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಿದ್ದರು. ಅದರ ಫಲವೆಂಬAತೆ ಒಂದೂವರೆ ತಿಂಗಳ ಹಿಂದೆ ಹೆಣ್ಣು ಮಗುವಾಗಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು.

ಪತ್ನಿ ನಾಗಮ್ಮ ತವರೂರು ದೇವನತೆಗನೂರಿನಲ್ಲಿ ಸೋಮವಾರ ತೊಟ್ಟಿಲು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಬಂಧುಗಳಿಗೂ ಆಮಂತ್ರಣ ನೀಡಿ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇನ್ನು ಈರಪ್ಪ ಭಾನುವಾರ ಮುಗುಳನಾಗಾವಿ ಶ್ರೀಗಳ ದರ್ಶನ ಪಡೆದು ಅವರಿಂದಲೇ ಮಗಳಿಗಾಗಿ ಸ್ವಪರ್ಣಿಕಾ ಎಂಬ ಹೆಸರು ಪಡೆದಿದ್ದ.

ಸೋಮವಾರ ಬೆಳಗ್ಗೆ ಭಂಕೂರಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಮನೆಗೆ ಬಂದಿದ್ದ. ಇನ್ನೇನು ರೆಡಿಯಾಗಬೇಕು ಅನ್ನುವಷ್ಟರಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ. ತಡವಾಗಿ ಮಗುವಾಗಿದ್ದು, ಖುಷಿಯಿಂದ ಮಗಳೊಂದಿಗೆ ಆಟವಾಡಬೇಕು ಎಂದುಕೊಂಡಿದ್ದ ತಂದೆ ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮಂಗಳವಾರ ಮಧ್ಯಾಹ್ನ 1ಕ್ಕೆ ಸ್ವಗ್ರಾಮದ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net