

ಶಹಾಬಾದ್; ಜೀವನದಲ್ಲಿ ಹಣ ಅಂತಸ್ತಿಗೆ ತೋರುವ ಆಸಕ್ತಿ ಆರೋಗ್ಯದ ಬಗ್ಗೆ ತೋರದಿರುವುದು ದುರಂತ. ಈ ಬಗ್ಗೆ ಎಲ್ಲರೂ ವಿಶೇಷ ಕಾಳಜಿ ವಹಿಸಬೇಕು ಎಂದು ಅದಾನಿ ಫೌಂಡೇಷನ್ ಸಿಎಂಒ ಪರಾಗಕುಮಾರ ಶ್ರೀವಾತ್ಸವ ಹೇಳಿದರು.
ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ವಾಡಿ ಪಟ್ಟಣದ ಎಸಿಸಿ ಅದಾನಿ ಫೌಂಡೇಷನ್, ಎನ್‌ಜಿಎನ್ ಫೌಂಡೇಷನ್ ಹಾಗೂ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೋಟ್ಯಂತರ ಹಣ ಗಳಿಸಿದರೂ ಸರಿಯಾದ ನಿದ್ರೆ, ಊಟ ಮಾಡಲು ಆಗುತ್ತಿಲ್ಲ. ಮೈತುಂಬ ಖಾಯಿಲೆಗಳಿವೆ. ದೈಹಿಕ, ಮಾನಸಿಕ ಆರೋಗ್ಯದ ಕಾಳಜಿ ವಹಿಸದಿರುವುದು ಇದಕ್ಕೆ ಕಾರಣ. ಅಪೌಷ್ಠಿಕ ಆಹಾರ, ಒತ್ತಡದ ಜೀವನ, ಕಡಿಮೆ ದೈಹಿಕ ಶ್ರಮ, ಅತಿ ಮೊಬೈಲ್, ಕಂಪ್ಯೂಟರ್ ಬಳಕೆ ಸೇರಿ ವಿವಿಧ ಕಾರಣಕ್ಕೆ ಬಿಪಿ, ಮದುಮೇಹ, ಹೃದಯ, ಕಣ್ಣು, ಎಲುಬಿನ ರೋಗಗಳು ಬರುತ್ತಿವೆ. ಇದನ್ನು ನಿಯಂತ್ರಿಸಬೇಕು ಎಂದರು.
ಎನ್‌ಜಿಎನ್ ಫೌಂಡೇಷನ್ ಮುಖ್ಯಸ್ಥ ಡಾ.ಸಂತೋಷ ನಾಗಲಾಪುರ ಮಾತನಾಡಿ, ನಿತ್ಯ ನಿಯಮಿತ ವ್ಯಾಯಾಮ, ಧ್ಯಾನ, ಸಮತೋಲನ ಆಹಾರದಿಂದ ರೋಗಗಳಿಂದ ದೂರವಿರಬಹುದು ಎಂದು ಹೇಳಿದರು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ.ಅಧ್ಯಕ್ಷ ಸುಮಿತ್ರಾ ತುಮಕೂರ, ಪಿಡಿಒ ಕಾವೇರಿ ರಾಠೋಡ್, ಡಾ.ಗುಂಡಣ್ಣ ಬಾಳಿ, ವೀರೇಶ ಎಂ.ಯು., ಮುಖಂಡರಾದ ಈಶ್ವರ ಬಾಳಿ, ತಿಪ್ಪಣ್ಣ ವಗ್ಗರ, ಸಾಹೇಬಗೌಡ ತುಮಕೂರ, ಶಿವಶರಣ ಕೊಳ್ಳಿ, ಸಿದ್ದಲಿಂಗ ಬಾಳಿ ಇತರರಿದ್ದರು.