

ಸೇಡಂ: ನಾಡೆಪಲ್ಲಿಯ ಪರಮೇಶ್ವರ ಕೆರೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಬಂದಿದ್ದು, ಕಾಮಗಾರಿಯ ಸಂಪೂರ್ಣ ತನಿಖೆ ನಡೆಸಲು ಸಂಬAಧಿಸಿದ ಇಲಾಖೆ ಮುಖ್ಯ ಇಂಜಿನಿಯರ್‌ಗೆ ಪತ್ರ ಬರೆಯುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ದಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹ್ತತಾರು ವರ್ಷಗಳಿಂದ ತಾಲೂಕಿನಲ್ಲೇ ಕೆಲಸ ಮಾಡುತ್ತಿರುವ ಅಧಿಕಾರಿಗಳು ಕೇವಲ ಭ್ರಷ್ಟಾಚಾರ ಮಾಡುತ್ತಿದ್ದು, ಜನಪರ ಕೆಲಸಗಳನ್ನು ಮರೆತಿದ್ದಾರೆ. ಹೀಗಾದರೆ ನಡೆಯದು, ಕೆಲಸ ಮಾಡುವ ಮನಸ್ಸಿದ್ದರೆ ಮಾತ್ರ ಇಲ್ಲಿರಿ, ಇಲ್ಲವಾದ್ರೆ ಜಾಗ ಖಾಲಿ ಮಾಡಿ ಎಂದು ಖಡಕ್ ಸೂಚನೆ ನೀಡಿದರು.
ಮತಕ್ಷೇತ್ರದ ಸುಲೇಪೇಟ, ಗಡಿಕೇಶ್ವಾರ, ಮುಧೋಳ, ಮಳಖೇಡ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ಪಾಳಿಯ ವೈದ್ಯರು ಕಡ್ಡಾಯವಾಗಿ ಇರಬೇಕು. ರಾತ್ರಿ ಸಮಯದಲ್ಲಿ ಡಾಕ್ಟರ್‌ಗಳು ಇರದಿರುವುದರಿಂದ ರೋಗಿಗಳಿಗೆ ಸಮಸ್ಯೆಯಾಗಲಿದೆ. ಅಲ್ಲಿರುವ ವೈದ್ಯರನ್ನು ಕೇಂದ್ರ ಸ್ಥಾನದಲ್ಲಿಯೇ ವಾಸಿಸಲು ನೋಟಿಸ್ ನೀಡಿ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜಯಕುಮಾರ ಪಾಟೀಲ್ ಅವರಿಗೆ ಸೂಚಿಸಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಶೇ.48 ಫಲಿತಾಂಶ ಲಭ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸಚಿವರು, ಇಷ್ಟು ಕಳಪೆ ಸಾಧನೆಯಾದರೆ ಹೆಂಗ್ರಿ? ಶಿಕ್ಷಕರು ಕೆಲಸ ಮಾಡುತ್ತಿಲ್ವಾ ? ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿ, ಮುಂಬರುವ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ವಿಶೇಷ ಅಭಿಯಾನ ನಡೆಸಲಾಗುವುದು ಎಂದರು. ಪ್ರೌಢಶಾಲೆಯಲ್ಲಿರುವ ಪ್ರತಿ ಶಿಕ್ಷಕರಿಗೆ ಆಯಾ ಶಾಲೆಯಲ್ಲಿನ ಎಸ್ಸೆಸ್ಸೆಲ್ಸಿ ಮಕ್ಕಳನ್ನು ವಿಂಗಡಣೆ ಮಾಡಿ ದತ್ತು ನೀಡುವ ಕೆಲಸ ಮಾಡಿ. ಅಂದಾಗ ಗುಣಮಟ್ಟ ಸುಧಾರಣೆ ಸಾಧ್ಯವಾಗಲಿದೆ. ಅದಾಗ್ಯೂ ಫಲಿತಾಂಶದಲ್ಲಿ ಬದಲಾವಣೆ ಆಗದಿದ್ದರೆ ಶಿಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿ ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ವೈ.ಹಂಪಣ್ಣ ಮಾತನಾಡಿ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮುಂಗಾರು ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ತೊಂದರೆಯಾಗದAತೆ ನೋಡಿಕೊಳ್ಳಲಾಗಿದೆ. ಕೀಟನಾಶಕ ವ್ಯಾಪರಿಗಳ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಹೆಚ್ಚಿನ ಬೆಲೆಯಲ್ಲಿ ಕೃಷಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎರಡು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಕೃಷಿ ಹೊಂಡ ನಿರ್ಮಾಣ, ಜೆಜೆಎಂ ಕೆಲಸ, ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ತಾಪಂ ಇಒ ಚನ್ನಪ್ಪ ರಾಯಣ್ಣವರ್ ಅವರಿಗೆ ಸಚಿವರು ತಾಕೀತು ಮಾಡಿದರು.
ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ತಹಸೀಲ್ದಾರ್ ಶ್ರೇಯಾಂಕ ಧನಶ್ರೀ, ಶಂಕರ ರಾಠೋಡ ಸೇರಿ ಸೇಡಂ, ಚಿಂಚೋಳಿ ತಾಲೂಕಿನ ಅಧಿಕಾರಿಗಳು ಪಾಲ್ಗೊಂಡಿದ್ದರು.