ಕಲಬುರಗಿ; ರಾಯರ ಆರಾಧನೆ ವೈಭವದ ತೆರೆ

PH 23
Published on

ಕಲಬುರಗಿ: ಕಳೆದ ಮೂರು ದಿನಗಳಿಂದ ನಗರ ಸೇರಿ ಜಿಲ್ಲಾದ್ಯಂತ ನಡೆಯುತ್ತಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನೆ ಮಹೋತ್ಸವಕ್ಕೆ ಶನಿವಾರ ಅದ್ದೂರಿ ತೆರೆ ಬಿದ್ದಿತು. ವಿವಿಧ ಮಠಗಳಲ್ಲಿ ಉತ್ತರಾರಾಧನೆ ವೈಭವದಿಂದ ಜರುಗಿತು.

ಬಸವೇಶ್ವರ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಉತ್ತರಾರಾಧನೆ ನಿಮಿತ್ತ ಪಂ.ಭಾರತೀಶ ಆಚಾರ್ಯ ಅವರ ನೇತೃತ್ವದಲ್ಲಿ ರಾಯರ ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಬಳಿಕ ಭಕ್ತರಿಂದ ಪಾರಾಯಣ ನಡೆಯಿತು. ಪಂ.ವೆAಕಣ್ಣಾಚಾರ್ ಪೂಜಾರ ಅವರು ರಾಯರ ಮಹಾತ್ಮೆ ಕುರಿತು ಪ್ರವಚನ ನೀಡಿದರು. ಬಳಿಕ ಹಸ್ತೋದಕ, ತೀರ್ಥ ಪ್ರಸಾದ ನಡೆಯಿತು. ಮಠದ ಪ್ರಮುಖರು, ಬಡಾವಣೆ ನಿವಾಸಿಗಳು ಪಾಲ್ಗೊಂಡಿದ್ದರು.

ನ್ಯೂ ರಾಘವೇಂದ್ರ ಕಾಲನಿಯಲ್ಲಿ ಶ್ರೀ ಸತ್ಯಾನಂದ ಪಾರಾಯಣ ಸಂಘದಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಸಂಭ್ರಮದಿಂದ ನಡೆಯಿತು. ಭಕ್ತರಿಂದ ಲಕ್ಷ ಪುಷ್ಪಾರ್ಚನೆ, ಲಕ್ಷ ರಾಯರ ಅಷ್ಟಾಕ್ಷರ ಮಂತ್ರ ಜಪ ಹಾಗೂ 108 ಬಾರಿ ರಾಯರ ಅಷ್ಟೋತ್ತರ ಪಾರಾಯಣ ಜರುಗಿತು. ವೆಂಕಟೇಶ ಕುಲಕರ್ಣಿ, ಶ್ರೀನಿವಾಸ ಜೋಶಿ ನೆಲೋಗಿ ಇತರರಿದ್ದರು.

ಬ್ರಹ್ಮಪುರದ ಉತ್ತರಾದಿ ಮಠದಲ್ಲಿ ಅದ್ದೂರಿಯಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಶನಿವಾರ ನೆರವೇರಿತು. ಬೆಳಗ್ಗೆ ಯತಿಗಳ ವೃಂದಾವನಕ್ಕೆ ಅಭಿಷೇಕ, ಅಲಂಕಾರ ಸೇರಿ ವಿಶೇಷ ಪೂಜೆಗಳು ನೆರವೇರಿದವು. ಸಂಜೆ ಪಂ. ವೆಂಕಣ್ಣಚಾರ್ ಪೂಜಾರ ಮಳಖೇಡ ಅವರು ಪ್ರಚನ ನೀಡಿದರು. ಪುಟ್ಟ ಕಂದಮ್ಮಗಳ ಕೋಲಾಟ ಗಮನಸೆಳೆಯಿತು. ಪಂ.ರಾಮಾಚಾರ ಘಂಟಿ, ಅಭಯ ಆಚಾರ್, ಪಂ.ವಿನೋದ ಆಚಾರ್ಯ ಗಲಗಲಿ, ಗಿರೀಶ ಕೃಷ್ಣ ಪೂಜಾರ್, ವಿನೂತ ಕುಲಕರ್ಣಿ, ಜಯತೀರ್ಥ ಜೋಶಿ, ನಾರಾಯಣ ಪೂಜಾರ, ರಘೋತ್ತಮ ಘಂಟಿ, ಉತ್ತಮ ಪುರೋಹಿತ, ಉಡುಪಿ ಪುರೋಹಿತ, ಭರತ್ ಚಿತ್ತಾಪುರ, ನರಹರಿ, ಸಮೀರ್ ಸಾವಳಗಿ ಪವನ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net