

ಕಲಬುರಗಿ: ಲೋಕ ಕಲ್ಯಾಣಾರ್ಥ ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ಅಪಾರ ಭಕ್ತರೊಂದಿಗೆ ಕೋಟನೂರ ಮಠದಿಂದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನವರೆಗೆ ಸೋಮವಾರ ಪಾದಯಾತ್ರೆ ನಡೆಸಿದರು.
ಕೋಟನೂರಿನ ಜಿಡಗಾ ಮಠದಲ್ಲಿ ಬೆಳಗ್ಗೆ ಶ್ರೀ ಸಿದ್ಧರಾಮೇಶ್ವರರ ಕತೃ ಗದ್ದುಗೆಗೆ ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ವಿಶೇಷ ಪೂಜೆ, ಅಭಿಷೇಕ ಮತ್ತು ಮಹಾಮಂಗಳಾರತಿ ನೆರವೇರಿಸಿದ ಬಳಿಕ `ಶಿವಯೋಗಿಯ ಶ್ರಾವಣ ಪಾದಯಾತ್ರೆ' ಆರಂಭವಾಯಿತು. ರಾಮಮಂದಿರ, ಹಳೇ ಜೇವರ್ಗಿ ರಸ್ತೆ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಕೋರ್ಟ್ ರಸ್ತೆ ಮೂಲಕ 9ಕ್ಕೆ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಿತು. ದಾರಿಯುದ್ದಕ್ಕೂ ಭಕ್ತರಿಂದ ಜೈಘೋಷಗಳು ಮೊಳಗಿದವು. ಸುತ್ತಮುತ್ತಲಿನ ಹಳ್ಳಿಗಳ ವಿವಿಧ ಭಜನಾ ತಂಡಗಳು ಭಜನೆ ಮಾಡುತ್ತಲೇ ಹೆಜ್ಜೆ ಹಾಕಿದವು.
ಶರಣಬಸವೇಶ್ವರ ಸಂಸ್ಥಾನದ ಪರವಾಗಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಶ್ರೀಗಳನ್ನು ಸ್ವಾಗತಿಸಿದರು. ಮಹಾದಾಸೋಹಿ ಶರಣಬಸವೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ದರ್ಶನ ಪಡೆದರು.
ಬೆಳಗ್ಗೆ 11ಕ್ಕೆ ಕೋಟನೂರ ಮಠದ ಸಿದ್ಧಶ್ರೀ ಡಿವೈನ್ ಪ್ಯಾಲೇಸ್‌ನಲ್ಲಿ ಭಕ್ತರಿಂದ ಶ್ರೀಗಳಿಗೆ ಬಿಲ್ವ ಪಾದಪೂಜೆ ನಡೆಯಿತು. ಶಾಸಕ ಅಲ್ಲಮಪ್ರಭು ಪಾಟೀಲ್, ಮುಖಂಡರಾದ ಶರಣು ಪಪ್ಪಾ, ಪವನಕುಮಾರ ವಳಕೇರಿ, ಬಸವರಾಜ ದೇಶಮುಖ, ಬಸವರಾಜ ಹಿರೇಮಠ, ಅರುಣ ಮಠಪತಿ ಇತರರಿದ್ದರು.
ಗುರುಗಳಾದ ಶ್ರೀ ಸಿದ್ಧರಾಮೇಶ್ವರರು, ಶ್ರೀ ಯಲ್ಲಾಲಿಂಗ ಮಹಾರಾಜರು ಸರ್ವರಿಗೂ ಒಳಿತು ಮಾಡಲಿದ್ದಾರೆ. ಪವಿತ್ರ ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ದೇವರು ಮತ್ತು ಗುರುಗಳ ಸ್ಮರಣೆ ಮಾಡಬೇಕು. ಭಕ್ತಿಯಿಂದ ಪುರಾಣ, ಪ್ರವಚನ ಆಲಿಸುವುದರಿಂದ ಜೀವನದಲ್ಲಿ ನೆಮ್ಮದಿ ಸಿಗಲಿದೆ. ಧರ್ಮ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಜನರು ಹೆಚ್ಚೆಚ್ಚು ಪಾಲ್ಗೊಳ್ಳಬೇಕು.
| ಶ್ರೀ ಡಾ.ಮುರುಘರಾಜೇಂದ್ರ ಮಹಾಸ್ವಾಮೀಜಿ ಜಿಡಗಾ, ಮುಗಳಖೋಡ ಮಠದ ಪೀಠಾಧಿಪತಿ