ಚಿತ್ತಾಪುರ; ಕಂಪನಿ-ರೈತರ ಮಧ್ಯೆ ಸಂಪರ್ಕ ಇರಲಿ

PH 02
Published on

ಚಿತ್ತಾಪುರ: ಅಲ್ಟಾçಟೆಕ್ ಸಿಮೆಂಟ್ ಕಂಪನಿಯವರು ದಿಗ್ಗಾಂವದಲ್ಲಿ ಸುಣ್ಣದ ಗಣಿಗಾರಿಕೆಗೆ 786.32 ಹೆಕ್ಟೇರ್ ಜಮೀನು ಖರೀದಿಸುವ ವೇಳೆ ದಲ್ಲಾಳಿಗಳನ್ನು ದೂರವಿಟ್ಟು ರೈತರನ್ನು ನೇರ ಸಂಪರ್ಕ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರುದ್ರ ಭೀಣಿ ಸಲಹೆ ನೀಡಿದರು.

ದಿಗ್ಗಾಂವ ಗ್ರಾಮದ ಶಂಭುಲಿAಗೇಶ್ವರ ದೇವಸ್ಥಾನ ಹೊರವಲಯದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯು ಅಲ್ಟಾçಟೆಕ್ ಸಿಮೆಂಟ್‌ಗಾಗಿ ಸುಣ್ಣದ ಕಲ್ಲು ಗಣಿಗಾರಿಕೆ ಆರಂಭಿಸಲು ಬುಧವಾರ ಆಯೋಜಿಸಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಕಂಪನಿಗಾಗಿ ದಿಗ್ಗಾಂವ ರೈತರು ಮತ್ತು ಗ್ರಾಮಸ್ಥರು ಜಮೀನು ನೀಡಲು ಸಿದ್ಧರಿದ್ದಾರೆ. ಆದರೆ ಭೂಮಿ ಖರೀದಿಸುವಾಗ ದಲ್ಲಾಳಿಗಳಿಗೆ ಅವಕಾಶ ನೀಡಕೂಡದು ಎಂದರು.

ರೈತ ಮುಖಂಡ ಶಾಮರಾವ ಸಂಗಾವಿ ಮಾತನಾಡಿ, ಗ್ರಾಮದ ಸುತ್ತ ಹೆಚ್ಚು ಕಂಪನಿಗಳು ಸ್ಥಾಪನೆ ಆಗುತ್ತಿರುವುದರಿಂದ ಅಂತರ್ಜಲ ಕುಸಿದು ನೀರಿನ ಕೊರತೆಯಾಗುತ್ತಿದೆ. ಕಂಪನಿ ಸ್ಥಾಪಿಸಲು ಅನುಕೂಲ ಮಾಡಿಕೊಡುತ್ತೇವೆ. ಆದರೆ ಊರಿಗೆ ಸಮರ್ಪಕ ನೀರು ಕಲ್ಪಿಸಬೇಕು. ಸತ್ತವರಿಗೆ ಹೂಳಲು ಜಮೀನು ಮೀಸಲಿಡಬೇಕು ಎಂದು ಬೇಡಿಕೆ ಮಂಡಿಸಿದರು.

ರೈತ ಮುಖಂಡರಾದ ಶ್ರೀಶೈಲ ಪಾಟೀಲ್, ಬಾಬುರಾವ ಪಾಟೀಲ್ ಮಾತನಾಡಿ, ಇಲ್ಲಿನ ಜಮೀನು ಬಂಗಾರದAತಿದೆ. ಹೀಗಾಗಿ ರೈತರಿಗೆ ಉತ್ತಮ ಬೆಲೆ ನೀಡಬೇಕು. ಜಮೀನು ಕಳೆದುಕೊಂಡ ಪರಿಶಿಷ್ಟ ಕುಟುಂಬದವರಿಗೆ ಬೇರೆ ಕಡೆ ಮೂರು ಎಕರೆ ಭೂಮಿ ಕೊಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಳಯ್ಯ ಬಡಿಗೇರ ಮಾತನಾಡಿ, ದಿಗ್ಗಾಂವ ದತ್ತು ತೆಗೆದುಕೊಳ್ಳಬೇಕು. ಕಂಪನಿ ಶಾಲೆಗಳಲ್ಲಿ ರೈತರ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸಿಎಸ್‌ಆರ್ ಅಡಿ ಗ್ರಾಮ ಅಭಿವೃದ್ಧಿಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಫೌಜಿಯಾ ತರನ್ನುಮ್ ಮಾತನಾಡಿ, ಸಭೆಯಲ್ಲಿ ರೈತರು ಹಾಗೂ ಗ್ರಾಮಸ್ಥರು ಪ್ರಸ್ತಾಪಿಸಿರುವ ಮಾಹಿತಿ, ಸಲಹೆಗಳನ್ನು ಆಲಿಸಲಾಗಿದೆ. ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಂಪನಿ ಮುಖ್ಯಸ್ಥ ಡಾ.ಕೆ.ಬಿ. ರೆಡ್ಡಿ ಮಾತನಾಡಿ, ಇಲ್ಲಿನ ಗಣಿಗಾರಿಕೆಯಲ್ಲಿ ಹೆಚ್ಚು ಉದ್ಯೋಗಾವಕಾಶ ಇರಲ್ಲ. ಗಣಿಗಾರಿಕೆಯಿಂದ ಪರಿಸರ ಹಾನಿಯಾಗದಂತೆ ತಡೆಯಲಾಗುವುದು. ಊರಿನ ಅಭಿವೃದ್ಧಿಗೆ ಗ್ರಾಮಸ್ಥರ ಸಲಹೆ ಪಡೆದು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ಗುರುಲಿಂಗಪ್ಪ ಪೊಲೀಸ್ ಪಾಟೀಲ್, ಜಗದೀಶ ಚವ್ಹಾಣ್, ಮಲ್ಲಿನಾಥ ಬಾಗೋಡಿ, ವೆಂಕಟೇಶ ಕಟ್ಟಿಮನಿ, ಚನ್ನವೀರ ಕಣಗಿ, ಶ್ರೀಮಂತ ಗುತ್ತೇದಾರ್, ಶ್ರೀಶೈಲ್ ಪಾಟೀಲ್ ಇಲ್ಲಿ, ಭೀಮರಾಯ ದೇವರ, ರಮೇಶ ಸಾಬಣ್ಣ, ಶಿವರಾಜ ವಿಶ್ವಕರ್ಮ, ನಾಗರಾಜ, ದೊಡ್ಡಪ್ಪ, ಇಮ್ಯಾನುವೆಲ್ ಮಾತನಾಡಿದರು.

ಪರಿಸರ ಇಲಾಖೆ ಅಧಿಕಾರಿ ರೇಖಾ, ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಾನೂನು ವಿಭಾಗದ ಮುಖ್ಯಸ್ಥ ರವಿಕುಮಾರ ಮಾಹಿತಿ ನೀಡಿದರು. ತಹಸೀಲ್ದಾರ್ ಅಮರೇಶ ಬಿರಾದಾರ, ಕಂಪನಿ ಅಧ್ಯಕ್ಷ ಉದಯ ಪವಾರ್, ಉಪಾಧ್ಯಕ್ಷ ಕೆವಿವಿವೈಎಸ್ ನಾರಾಯಣ, ಅಣ್ಣಾರಾವ ಪಾಟೀಲ್ ಮುಡಬೂಳ, ಗೋಪಾಲ ರಾಠೋಡ್, ಶರಣಪ್ಪ ಪಲ್ಲೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net