ಕಲಬುರಗಿಯಲ್ಲಿ ಚೌಡಯ್ಯ ಜಯಂತ್ಯುತ್ಸವ 21ರಂದು

AmbigaraChoudiaha3
Published on

ಕಲಬುರಗಿ: ಕೋಲಿ ಕಬ್ಬಲಿಗ ಸಮಾಜ, ಜಿಲ್ಲಾಡಳಿತದ ಸಹಯೋಗದಲ್ಲಿ ನಗರದಲ್ಲಿ ಜ.21ರಂದು ನಿಜಶರಣ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತ್ಯುತ್ಸವವನ್ನು ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.

ಜಿಲ್ಲಾ ಜಯಂತ್ಯುತ್ಸವ ಸಮಿತಿಯ ಶಿವಾನಂದ ಹೊನಗುಂಟಿರನ್ನು ಅಧ್ಯಕ್ಷತೆಯಲ್ಲಿ ಜ.೨೧ರಂದು ಬೆಳಗ್ಗೆ ೧೧ಕ್ಕೆ ನೆಹರು ಗಂಜ್‌ನ ನಗರೇಶ್ವರ ಶಾಲೆಯಿಂದ ಡಾ.ಎಸ್.ಎಂ.ಪAಡಿತ ರಂಗಮAದಿರದವರೆಗೆ ಚೌಡಯ್ಯ ಭಾವಚಿತ್ರದ ಮೆರವಣಿಗೆಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅದ್ದೂರಿ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿದ್ದು, ಮಧ್ಯಾಹ್ನ ೨ಕ್ಕೆ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ವಿಶೇಷ ಉಪನ್ಯಾಸ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಉಚಿತ ಆರೋಗ್ಯ ಶಿಬಿರದ ಜತೆಗೆ ಯುನೈಟೆಡ್ ಆಸ್ಪತ್ರೆಯಿಂದ ರಿಯಾಯಿತಿ ದರದ ಆರೋಗ್ಯ ಕಾರ್ಡ್ ವಿತರಣೆ ನಡೆಯಲಿದೆ. ಜಯಂತಿ ಹಿನ್ನೆಲೆ ಸಮಾಜದ ಎಲ್ಲ ಸಮುದಾಯದ ಮುಖಂಡರ ಪೂರ್ವಭಾವಿ ಸಭೆ ನಡೆಸಿ, ಪಕ್ಷಾತೀತವಾಗಿ ಉತ್ಸವ, ಸಮಾಜದ ಪರ ಹೋರಾಟ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.

ಮುಖAಡರಾದ ಅವ್ವಣ್ಣ ಮ್ಯಾಕೇರಿ, ಬಸವರಾಜ ಬೂದಿಹಾಳ, ರಮೇಶ ನಾಟೀಕಾರ, ಶಿವಾನಂದ ಹೊನಗುಂಟಿ, ಅಣ್ಣಪ್ಪ ಜಮಾದಾರ, ರಾಯಪ್ಪ ಹೊನಗುಂಟಿ, ಬಸವರಾಜ ಹರವಾಳ, ಶಾಂತಪ್ಪ ಕೂಡಿ, ಗುಂಡು ಐನಾಪುರ ಇದ್ದರು.

ಚೌಡಯ್ಯ ಮೂರ್ತಿ ಅಡಿಗಲ್ಲು: ನಗರದ ಮಹಾತ್ಮಗಾಂಧೀಜಿ ಮೂರ್ತಿ ಪಕ್ಕದಲ್ಲಿನ ಸ್ಥಳದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಜ.೨೧ರಂದು ಅಡಿಗಲ್ಲು ಹಾಕಲಾಗುವುದು. ಬೆಂಗಳೂರಿನ ವಿಧಾನಸೌಧದ ಎದುರು ಚೌಡಯ್ಯ ಮೂರ್ತಿ ಸ್ಥಾಪನೆಗೆ ಆಗ್ರಹಿಸಿದ್ದು, ವಿಧಾನಸೌಧ ಅಥವಾ ಬೆಳಗಾವಿಯ ಸುವರ್ಣ ಸೌಧದ ಎದುರು ಮೂರ್ತಿ ಸ್ಥಾಪನೆಗೆ ಚಿಂತನೆ ನಡೆಸಿದ್ದು, ಸಕಾರಾತ್ಮಕ ಸ್ಪಂದನೆ ದೊರಕಿದೆ. ೬ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕೋಲಿ ಭವನವನ್ನು ಜ.೨೬ರಂದು ಉದ್ಘಾಟಿಸಲಿದ್ದು, ಅಂದೇ ಸಮಾಜದ ಬೃಹತ್ ಸಮಾವೇಶವೂ ನಡೆಯಲಿದೆ. ಚೌಡಯ್ಯನವರ ಐಕ್ಯ ಸ್ಥಳದಲ್ಲಿ ಕೂಡಲಸಂಗಮ ಮಾದರಿ ಪ್ರಾಧಿಕಾರ ಸ್ಥಾಪಿಸಲು ಆಗ್ರಹಿಸಲಾಗಿದೆ ಎಂದು ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.

ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆಗೆ ಕೇಂದ್ರಕ್ಕೆ ಕಳುಹಿಸಿದ್ದ ಪ್ರಸ್ತಾವನೆ ವಾಪಸ್ ಬಂದಿದ್ದು, ಕೇಂದ್ರ ಸರ್ಕಾರ ಕೇಳಿರುವ ತಿದ್ದುಪಡಿಗಳನ್ನು ಸರಿಪಡಿಸಿ, ಪುನಃ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಚುನಾವಣೆಯಲ್ಲಿ ಎಸ್ಟಿ ಸೇರ್ಪಡೆ ಮಾತು ಬಂದು, ನಂತರ ಮೌನವಾಗುತ್ತಿದ್ದು, ಎರಡು ತಿಂಗಳಲ್ಲಿ ತಾರ್ಕಿಕ ಅಂತ್ಯ ಹಾಡದಿದ್ದರೆ ಪಕ್ಷಾತೀತ ಹೋರಾಟ ರೂಪಿಸಲಾಗುವುದು. ಸಮಾಜಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. | ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net