

ಚಿಂಚೋಳಿ: ಅವಳಿ ಪಟ್ಟಣದ ಸಮಗ್ರ ಪ್ರಗತಿಗೆ ಎಲ್ಲರೂ ಸೇರಿ ಶ್ರಮಿಸುವ ಮೂಲಕ ಮಾದರಿ ತಾಲೂಕು ಮಾಡೋಣ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಸ್ಪಂದನ ಸಭೆ ಉದ್ಘಾಟಿಸಿದ ಅವರು, ಪಟ್ಟಣದ ಕುಡಿವ ನೀರು, ಶೌಚಗೃಹ, ಬೀದಿ ದೀಪ, ಸಿಸಿ ರಸ್ತೆ, ಚಂದಾಪುರದಲ್ಲಿ ಹಿಂದು ರುದ್ರಭೂಮಿ, ಡಾ.ಬಾಬುಜಗಜೀವನ್ ರಾಮ್ ಭವನ ನಿರ್ಮಾಣ, ಸ್ಮಶಾನ ಭೂಮಿ ಮಂಜೂರು ಇತರ ಸಮಸ್ಯೆ ಮತ್ತು ಬೇಡಿಕೆಗಳಿಗೆ 20 ದಿನದಲ್ಲಿ ಪರಿಹಾರ ಕಲ್ಪಿಸಬೇಕು. ಏನೇ ಅಡೆ-ತಡೆ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಭೂಸೇನೆ, ಸ್ಲಂ ಬೋರ್ಡ್ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಸಬೇಕು. 15 ವರ್ಷದ ಹಿಂದೆ ಸೂರಿಲ್ಲದವರಿಗಾಗಿ ನಿರ್ಮಿಸಿರುವ ಮನೆಗಳ ವಿತರಣೆ ಯಾಕೆ ವಿಳಂಬವಾಗುತ್ತಿದೆ? ಈ ಕುರಿತು ಪುರಸಭೆ ಚುನಾಯಿತ ಸದಸ್ಯರು, ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಸಮಗ್ರ ವರದಿ ಕೊಟ್ಟರೆ ಸಂಬAಧಿತರ ಜತೆ ಚರ್ಚಿಸಿ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹ್ಮದ್ ಗಫಾರ್, ಸರ್ಕಾರಿ ಆಸ್ಪತ್ರೆ ಆರೋಗ್ಯಾಧಿಕಾರಿ ಸಂತೋಷ ಪಾಟೀಲ್, ಪ್ರಮುಖರಾದ ಅಬ್ದುಲ್ ಬಾಸೀದ್, ಆನಂದ ಟೈಗರ್, ಅನ್ವರ್ ಖತೀಬ್, ನಾಗೇಂದ್ರಪ್ಪ ಗುರಂಪಳ್ಳಿ, ರೂಪಕಲಾ ಕಟ್ಟಿಮನಿ, ರಾಧಾಬಾಯಿ ಓಲಗೇರಿ, ಬಸವರಾಜ ಶಿರಸಿ, ಶಿವಕುಮಾರ ಪೋಚಾಲಿ, ಜಗನ್ನಾಥ ಗುತ್ತೇದಾರ್ ಇತರರಿದ್ದರು. ವಿವಿಧ ವಾರ್ಡ್ಗಳ ಸಮಸ್ಯೆ ಬಗ್ಗೆ ಸುಮಾರು 42 ಅರ್ಜಿ ಸಲ್ಲಿಕೆಯಾಗಿವೆ.