

ಆಳಂದ; ಮಾದನಹಿಪ್ಪರಗಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಶಿಫಾರಸು ಪತ್ರ ಸಲ್ಲಿಸಲು ಸೋಮವಾರ ಅಧ್ಯಕ್ಷೆ ಸುವರ್ಣಾ ಮೈಂದರಗಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ತೀರ್ಮಾನಿಸಿದರು.
ಸದಸ್ಯರು ಮಾತನಾಡಿ, ಮಾದನಹಿಪ್ಪರಗಿ ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮವಾಗಿದ್ದು, ಇಲ್ಲಿ ಉಪ ತಹಸೀಲ್ದಾರ್, ಸ್ಟೇಟ್ ಬ್ಯಾಂಕ್, ಸಮುದಾಯ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ, ತೋಟಗಾರಿಕೆ, ಸರ್ಕಾರಿ ಮತ್ತು ಖಾಸಗಿ ಸೇರಿ ನಾಲ್ಕು ಪ್ರೌಢಶಾಲೆ, ಎರಡು ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸ್ ನಿಲ್ದಾಣ, ಪೊಲೀಸ್ ಠಾಣೆ, ಜೆಸ್ಕಾಂ ಉಪವಿಭಾಗ ಕಚೇರಿಗಳಿವೆ. ಅಲ್ಲದೆ 25 ಹಳ್ಳಿಗಳಿಗೆ ವ್ಯಾಪಾರ ಕೇಂದ್ರದ ಗ್ರಾಮವಾಗಿದ್ದು, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಹೊಂದಲು ಎಲ್ಲ ಅರ್ಹತೆ ಹೊಂದಿದೆ ಎಂದು ಹೇಳಿದರು.
ಪಿಡಿಒ ಶೇಖರ ಶಂಖು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದ ನರೇಗಾ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು. ರೈತರಿಗೆ ಅನುಕೂಲವಾಗುವಂತೆ ನಮ್ಮ ಹೊಲ ನಮ್ಮ ರಸ್ತೆ, ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಉಪಾಧ್ಯಕ್ಷ ಶಿವಲಿಂಗ ಇಂಗಳೆ ಮಾತನಾಡಿ, ವೈಯಕ್ತಿಕ ಶೌಚಗೃಹಗಳ ನಿರ್ಮಾಣ, ಕೂಸಿನ ಮನೆಗೆ ಸಿಬ್ಬಂದಿ ನೇಮಕಾತಿ, ಅರಿವಿನಮನೆ ಗ್ರಾಂಥಾಲಯದ ಕಟ್ಟಡ ನಿರ್ಮಿಸಬೇಕು. ವಾರ್ಡ್ 7ರಲ್ಲಿ ಜನರು ಮುಖ್ಯ ಕುಡಿವ ನೀರಿನ ಪೈಪ್‌ಲೈನ್ ಒಡೆದು ತಮ್ಮ ಮನೆಗಳಿಗೆ ಅಕ್ರಮ ನಳ ಜೋಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ, ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಸದಸ್ಯರಾದ ಶಿವಲಿಂಗಪ್ಪ ಜಮಾದಾರ, ಮಹಾದೇವಯ್ಯ ಸ್ವಾಮಿ, ಚನ್ನಪ್ಪ ಹಾಲೇನವರ್, ಸಂಗಣ್ಣ ಕೋಳಶೆಟ್ಟಿ, ಈರಮ್ಮ ಸಂಬಾಳೆ, ಉಮಾ ಮಾತಂಗಿ, ಧರ್ಮಣ್ಣ ಕೌಲಗಿ, ಉಷಾ ಬಂಡಾರೆ ಇತರರಿದ್ದರು