

ಬಾಬುರಾವ ಯಡ್ರಾಮಿ ಕಲಬುರಗಿ
ಆಗಸ್ಟ್ 28 ರಂದು ಸಿಂಧನೂರಿನಲ್ಲಿ ಸಾರಿಗೆ ಸಚಿವರಿಂದ ಚಾಲನೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾಹಿತಿ
ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲ್ಯಾಣ ರಥ” ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಗಳು ಸೇರ್ಪಡೆಯಾಗಿವೆ. ಇದರಿಂದ ಕೆಕೆಆರ್ ಟಿಸಿ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಂತೆ ಆಗಿದೆ.
ಹೈಟೆಕ್ ಓಲ್ವೋ ಬಸ್‌ಗಳನ್ನು ಈಗಾಗಲ ಖರೀದಿಸಲಾಗಿದ್ದು, ಸಂಸ್ಥೆ ವ್ಯಾಪ್ತಿಯ ಎಲ್ಲ ವಿಭಾಗಗಳಿಗೆ ಬಸ್ ಹಂಚಿಕೆ ಮಾಡಲಾಗುತ್ತಿದೆ. ಓಲ್ವೋ ಬಸ್ ಗೆ ಕಲ್ಯಾಣ ರಥ ಎಂದು ಹೆಸರಿಡಲಾಗಿದೆ.
ಸಂಸ್ಥೆಗೆ “ಕಲ್ಯಾಣ ರಥ” ಬ್ರ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಹೊಸದಾಗಿ ಸೇರ್ಪಡೆಯಾಗಿದ್ದು, ರೈಲು ಸೇವೆ ಇಲ್ಲದ ಸಿಂಧನೂರಿನಿಂದ ಆರಂಭಿಕವಾಗಿ ಸೇವೆಗೆ ಇಳಿಸಲಾಗುತ್ತಿದೆ. ತದನಂತರ ಪ್ರದೇಶದ ಇತರೆ ಭಾಗಕ್ಕೂ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ವಿಜಯವಾಣಿ ಗೆ ಮಾಹಿತಿ ನೀಡಿದರು.
ಕಲಬುರಗಿಯಿಂದಲೂ ಶೀಘ್ರದಲ್ಲೇ ಕಲ್ಯಾಣ ರಥ ಶುರುವಾಗಲಿದೆ. ಸಂಸ್ಥೆಯಲ್ಲಿ ಇದುವರೆಗೂ ಓಲ್ವೋ ಬಸ್ ಇರಲಿಲ್ಲ. ಈಗ ಸೇರ್ಪಡೆಯಾಗಿದ್ದು, ಇದೇ ಮೊದಲು. ಇದರಿಂದಾಗಿ ಕಲ್ಯಾಣ ಸಾರಿಗೆ ಕಲ್ಯಾಣ ರಥ ಆರಂಭಿಸುವ ಮೂಲಕ ಹಿಂದುಳಿದ ಭಾಗದಲ್ಲಿ ಹೈಟೆಕ್ ಬಸ್ ಸಂಚಾರ ಆರಂಭಿಸಿದೆ.
ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ “ ಮೊದಲ ಬಸ್ ಕಾರ್ಯಾಚರಣೆಗೆ ಆಗಸ್ಟ್ 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಲಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ವಿವರಿಸಿದರು.
ಸಿಂಧನೂರು-ಬೆಂಗಳೂರು ನಡುವಿನ ಈ ಐಷರಾಮಿ ಬಸ್ ಪ್ರತಿ ದಿನ ಸಿಂಧನೂರಿನಿಂದ ರಾತ್ರಿ 10 ಗಂಟೆಗೆ ಹೊರಟು ಕಾರಟಗಿ-ಗಂಗಾವತಿ- ಬೂದುಗುಂಪ ಕ್ರಾಸ್-ಹೊಸಪೇಟೆ- ಕೂಡ್ಲಿಗಿ-ಹಿರಿಯೂರು-ತುಮಕೂರು ಮಾರ್ಗವಾಗಿ ಮರುದಿನ ಬೆಂಗಳೂರಿಗೆ 5.30 ಗಂಟೆಗೆ ತಲುಪಲಿದೆ. ಮಾರನೇ ದಿನ ಅದೇ ಮಾರ್ಗದಲ್ಲಿ ಬೆಂಗಳೂರಿನಿಂದ ರಾತ್ರಿ 10.15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5.45 ಗಂಟೆಗೆ ಸಿಂಧನೂರು ತಲುಪಲಿದೆ.
ಕಲ್ಯಾಣ ರಥದ ವಿಶೇಷತೆ:
“ಕಲ್ಯಾಣ ರಥ” ಬ್ಯಾಂಡಿನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಕ್ಲಾಸ್ 40 ಆಸನಗಳ ಈ ಐಷರಾಮಿ ಬಸ್ 350 ಬಿ.ಎಸ್-6 ಇಂಜಿನ್ ಹೊಂದಿದೆ. ಬಸ್ಸಿಗೆ ವಿಶಿಷ್ಟ ಸಸ್ಪೆನ್ಸನ್‍ಗಳನ್ನು ಅಳವಡಿಸಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಇದ್ದು, ಸ್ವಯಂ ಚಾಲಿತ ಬಾಗಿಲು ತೆರೆಯುವ ವ್ಯವಸ್ಥೆ, ಬೆಂಕಿ ನಂದಿಸುವ ಉಪಕರಣಗಳ ವ್ಯವಸ್ಥೆ, ವಾಹನದ ಟ್ರ್ಯಾಕಿಂಗ್ ಗುರುತು ವ್ಯವಸ್ಥೆ, ಮೋಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್, ಲ್ಯಾಪ್ ಟಾಪ್ ಬ್ಯಾಗ್ ಇಡುವ ವ್ಯವಸ್ಥೆ ಇದೆ. ಒಟ್ಟಾರೆಯಾಗಿ ಆರಾಮದಾಯಕ ಮತ್ತು ಸುಖಕರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.