

ಕಿಕ್ಕೇರಿ : ಬಾರದ ಮಳೆ, ಕಣ್ಣಾಮುಚ್ಚಾಲೆಯಾಟದ ಮಳೆಯಿಂದ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ದೊಡ್ಡ ಪ್ರಮಾಣದ ಸಮಸ್ಯೆಯಾಗಿದೆ. ಸುಮಾರು 90 ಮನೆಗಳಿರುವ ಕಿಕ್ಕೇರಿ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಗ್ರಾಮದ ಜನತೆಗಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಚೌಡೇನಹಳ್ಳಿ ಗ್ರಾಪಂ ವತಿಯಿಂದ ಮೂರು ಕೊಳವೆಬಾವಿ ಕೊರೆಸಲಾಗಿತ್ತು. ಓವರ್‌ಹೆಡ್ ಟ್ಯಾಂಕ್ ಮೂಲಕ ಮನೆಮನೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲಾಗುತ್ತಿತ್ತು.
ಕಳೆದ ಎರಡು ತಿಂಗಳಿನಿಂದ ಚಾಲನೆಯಲ್ಲಿದ್ದ ಕೊಳವೆ ಬಾವಿಗಳಲ್ಲಿ ನೀರು ಈಗ ಬರಿದಾಗಿದೆ. ಅಂರ್ತಜಲ ಬತ್ತಿ ನೀರು ಬಾರದಂತಾಗಿದೆ. ಪರಿಣಾಮ ಗ್ರಾಮಸ್ಥರಿಗೆ ಕುಡಿಯಲು ನೀರಿಗೆ ತೀವ್ರ ಸಂಕಟವಾಗಿದೆ. ಸ್ಥಳೀಯ ಗ್ರಾಪಂ. ಸದಸ್ಯ ಆರ್.ಕೆ. ರವಿಕುಮಾರ್ ತಮ್ಮ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನಿತ್ಯ ನೀರು ಸರಬರಾಜು ಮಾಡುತ್ತಿದ್ದಾರೆ. ಸದ್ಯ ಬಾಯಾರಿಕೆ ಇಂಗಿಸಿಕೊಳ್ಳಲು ಇದು ನೆರವಾಗಿದೆ. ವಿಶೇಷ ಕಾಳಜಿ ವಹಿಸಿ, ಅಧಿಕಾರಿಗಳ ಮನವೊಲಿಸಿ ರವಿಕುಮಾರ್ ಕೊರೆಸಿದ್ದ ಎರಡು ಕೊಳವೆ ಬಾವಿಗಳು ಒಣಗಿದ್ದು, ಉಳಿದ ಬೋರ್‌ಗಳಲ್ಲಿ 300ಅಡಿಗೆ ಸಿಗುತ್ತಿದ್ದ ನೀರು 800ಅಡಿ ಕೊರೆಸಿದರೂ ಸಿಗದಂತಾಗಿದೆ.
ಬದಲಾದ ದಿನಚರಿ: ಕೃಷಿ ಪ್ರಧಾನ ಗ್ರಾಮದಲ್ಲಿ ನೀರಿನ ಸಮಸ್ಯೆ ಕಾಡುತ್ತಿದ್ದು, ಬೆಳಗಿನ ವೇಳೆಯೇ ದಿನಚರಿಯೇ ಬದಲಾಗಿದೆ. ಮೊದಲು ಕುಡಿವ ನೀರು ತುಂಬಿಸಲು ಹೋರಾಟ ನಡೆಸಿಯೇ ಜಮೀನುಗಳಿಗೆ ತೆರಳಬೇಕಿದೆ. ಗ್ರಾಮದ ಪ್ರತಿಮನೆಗಳಲ್ಲಿಯೂ ಆಡು, ಕುರಿ, ಹಸು, ಎಮ್ಮೆಗಳಿವೆ. ಮೇವಿದ್ದರೂ ನೀರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ಜಾನುವಾರುಗಳಿಗೆ ಸಮರ್ಪಕವಾಗಿ ಸಿಗದೇ ಇಲ್ಲಿನ ಹೈನೋದ್ಯಮಕ್ಕೆ ಹೊಡೆತಬಿದ್ದಿದೆ. ಹಾಲಿನ ಪ್ರಮಾಣ ಕಡಿಮೆಯಾಗಿದೆ ಎನ್ನುವುದು ಹೈನುಗಾರರ ವೇದನೆಯಾಗಿದೆ.