ಶ್ರದ್ಧೆಯಿಂದ ಮಾಡುವ ಕಾಯಕದಲ್ಲೇ ದೇವರು ಇದ್ದಾನೆ

08-kkr2(2-25 bolamaranali degula bimba puje
Published on

 ಬೋಳಮಾರನಹಳ್ಳಿಯಲ್ಲಿ ಲಕ್ಷ್ಮೀದೇವಿ ದೇಗುಲ ಉದ್ಘಾಟನೆ

ಕಿಕ್ಕೇರಿ: ಗಂಡ ಹೆಂಡತಿ ಒಟ್ಟಾಗಿ ಇರುವುದೇ ಅವಿಭಕ್ತ ಕುಟುಂಬ ಎಂಬಸ್ಥಿತಿ ನಿರ್ಮಾಣವಾಗಿರುವ ಇಂದಿನ ದಿನಗಳಲ್ಲಿ ಮನವನ್ನು ಶುದ್ಧವಾಗಿ ಇಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

ಹೋಬಳಿಯ ಬೋಳಮಾರನಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ಲಕ್ಷ್ಮೀದೇವಿ ದೇಗುಲ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಾನು ಬಾಲ್ಯವನ್ನು ಸಂಭ್ರಮದಿಂದ ಕಳೆದ ಗ್ರಾಮವಿದು. ಆಗ ಕೂಡು ಕುಟುಂಬದ ವ್ಯವಸ್ಥೆ ಇತ್ತು. ಹಣ ಇಲ್ಲದಿದ್ದರೂ ನೆಮ್ಮದಿ, ಶಾಂತಿ ಕುಟುಂಬದಲ್ಲಿ ಇತ್ತು. ಮನೆಯ ಎಲ್ಲರೂ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಆಗ ಆರೋಗ್ಯ, ನೆಮ್ಮದಿ ತನ್ನಿಂದ ತಾನೇ ಲಭಿಸುತಿತ್ತು. ಆದರೆ ಇಂದು ಗಂಡ -ಹೆಂಡತಿ ಒಟ್ಟಿಗೆ ಇರುವುದೇ ಅವಿಭಾಜ್ಯ ಕುಟುಂಬ ಎಂಬಂತಾಗಿ, ಹಣ ಮತ್ತು ಸಲವತ್ತುಗಳಿದ್ದರೂ ಮಾನಸಿಕ ಸ್ಥಿತಿಗಳು ಅಯೋಮಯವಾಗಿವೆ ಎಂದರು.

ಹೃದಯಕ್ಕೆ ಬಡತನ ಬೇಡ:

ಬಡತನ ಎಂಬುದು ಹೃದಯಕ್ಕೆ ಇರಬಾರದು. ನಮ್ಮ ದೇಶದಲ್ಲಿ ಇಂದು ಒಂಟಿತನ ಕಾಡುತ್ತಿದೆ. ಎಲ್ಲರ ಬಳಿಯೂ ಮೊಬೈಲ್ ಇದೆ. ಹೊರಗಿನ ಪ್ರಪಂಚ ನೋಡಿ ಖುಷಿ ಪಡಲಾಗದ ಸ್ಥಿತಿಯಲ್ಲಿ ಇದ್ದಾರೆ. ದೇಶದ ಮೊದಲ ಶತ್ರು ಎಂದರೆ ಅದು ನಮ್ಮಲ್ಲಿರುವ ಸೋಮಾರಿತನ ಎಂಬುದನ್ನು ಅರಿತು ಕ್ರಿಯಾಶೀಲರಾಗಬೇಕು ಎಂದರು. ದೇಗುಲಗಳು ಸಮಾಜದ ಸರ್ವರನ್ನೂ ಒಂದೆಡೆ ಸೇರಿಸಿ ಸಾಮರಸ್ಯ ಬೆಸೆಯುವ ಶ್ರದ್ಧಾ ಕೇಂದ್ರವಾಗಬೇಕು. ನಮ್ಮ ಸಂಪ್ರದಾಯ, ಪೂಜೆ, ಆರಾಧನೆಗಳನ್ನು ಮಕ್ಕಳಿಗೆ ಕಲಿಸಬೇಕು. ಸಹಾಯ ಮಾಡುವ ಗುಣವನ್ನು ಮಕ್ಕಳಲ್ಲೂ ರೂಢಿಸಬೇಕು ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.

ಆರೋಗ್ಯವೇ ಮುಖ್ಯ: ಶ್ರಮವಹಿಸಿ ಕಾಯಕ ಮಾಡಿದರೆ ದೇವರು ನಮ್ಮ ಮನದಲ್ಲಿ ಇರುತ್ತಾನೆ. ನಮ್ಮ ಹಿರಿಯರಿಗೆ ಅಂದು ಬೈಸಿಕಲ್ ಎಂಬುದೇ ರಥವಾಗಿತ್ತು. ದೇಹಕ್ಕೆ ಇಲ್ಲಾದರೂ ವ್ಯಾಯಾಮ ದೊರಕುತ್ತಿತ್ತು. ಇಂದು ಮನೆಗೆ 4 ವಾಹನವಿದೆ. ಮಕ್ಕಳು ದೈಹಿಕ ಚಟುವಟಿಕೆ ರಹಿತರಾಗುತ್ತಿದ್ದಾರೆ. ಕಾಯಿಲೆ ಬೇಗ ಬರುತ್ತಿವೆ. ಮಕ್ಕಳನ್ನು ಪಾಲಕರೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಸ್ಥಿತಿ ಬಂದಿದೆ ಎಂದು ಡಾ. ಮಂಜುನಾಥ್ ವಿಷಾದಿಸಿದರು. ನಮ್ಮ ದೇಶದಲ್ಲಿ ಪ್ರತಿವರ್ಷ 30 ಲಕ್ಷ ಜನ ಹೃದಯಾಘಾತದಿಂದ ಸಾವಿಗೀಡಾಗುತ್ತಿದ್ದಾರೆ. ವ್ಯಾಯಾಮ ಮತ್ತು ಕೆಲಸದಿಂದ ಆರೋಗ್ಯ ಕಾಪಾಡಿ ಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಶಾಸಕ ಎಚ್.ಡಿ. ರೇವಣ್ಣ ಅವರ ಕುಟುಂಬ ಗ್ರಾಮದೊಂದಿಗೆ ಅವಿನಾ ಸಂಬಂಧ ಹೊಂದಿದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ನಮ್ಮ ಇಡೀ ಕುಟುಂಬದ ಸಹಕಾರವಿದೆ ಎಂದವರು ಭರವಸೆ ನೀಡಿದರು.

ವಿವಿಧ ಹವನ, ಹೋಮ: ದೇವಾಲಯ ಉದ್ಘಾಟನೆ ಅಂಗವಾಗಿ ವಿವಿಧ ಪೂಜೆ, ಹೋಮ ಹವನಾದಿಗಳು ನಡೆದವು. ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಆದಿಚುಂಚನಗಿರಿ ಹಾಸನ ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮನಾಥ ಸ್ವಾಮೀಜಿ, ಎಂಎಲ್‌ಸಿ ಸೂರಜ್ ರೇವಣ್ಣ, ಶಾಸಕ ಎಚ್.ಡಿ. ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಆರ್‌ಟಿಒ ಮಲ್ಲಿಕಾರ್ಜುನ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಸಿ.ಎನ್. ಪುಟ್ಟ ಸ್ವಾಮಿಗೌಡ, ಕೆಪಿಸಿಸಿ ಸದಸ್ಯ ಸುರೇಶ್, ಸಚಿನ್ ಚಲುವರಾಯಸ್ವಾಮಿ, ಜಿಪಂ. ಮಾಜಿ ಅಧ್ಯಕ್ಷೆ ಕುಸುಮಾ, ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಕಿರಣ್, ಮುಖಂಡರಾದ ಬಿ.ಎಸ್. ಮಂಜುನಾಥ್, ಜಯದೇವ, ಶಿವಲಿಂಗೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net