ಭಕ್ತರ ಕಷ್ಟ ಕರಗಿಸೋ ಅಹೋಬಲ ನರಸಿಂಹ ; ಜಕ್ಕೇನಹಳ್ಳಿಯಲ್ಲಿ ಜಾತ್ರೆಗೆ ಸಕಲ ಸಿದ್ಧತೆ *ನಟ ಅರ್ಜುನ್ ಸರ್ಜಾ ಕುಟುಂಬದಿಂದ ದೇಗುಲ ಜೀರ್ಣೋದ್ಧಾರ

12 Madhugiri 02 - Jakkenahalli Story
Published on

ಮಧುಗಿರಿ : ಬೇಡಿ ಬರುವ ಭಕ್ತರ ಕಷ್ಟ, ಕಾರ್ಪಣ್ಯಗಳನ್ನು ಕರಗಿಸಿ ನೊಂದವರ ಉದ್ಧಾರಕನಾಗಿ ದೊಡ್ಡೇರಿ ಹೋಬಳಿ ಜಕ್ಕೇನಹಳ್ಳಿಯಲ್ಲಿ ನೆಲಸಿದ್ದಾನೆ ಅಹೋಬಲ ಲಕ್ಷ್ಮೀ ನರಸಿಂಹಸ್ವಾಮಿ. ಉದ್ಭವ ಮೂರ್ತಿಯಾಗಿ ಸಾಲಿಗ್ರಾಮದ ರೂಪದಲ್ಲಿ ನೆಲೆಸಿದ್ದು, ಅಪರೂಪದ ವಿಗ್ರಹವಾಗಿದೆ. ದೇವರಾಯನ ದುರ್ಗದ ಯೋಗ, ಭೋಗ ನರಸಿಂಹ, ತಿಪಟೂರು ತಾಲೂಕು ಹತ್ಯಾಳು ನರಸಿಂಹಸ್ವಾಮಿ, ಶಿರಾ ಸೀಬಿಯ ನರಸಿಂಹಸ್ವಾಮಿ ಕ್ಷೇತ್ರ, ಮಧುಗಿರಿ ತಾಲೂಕಿನ ದೊಡ್ಡದಾಳವಟ್ಟದ ಲಕ್ಷ್ಮೀನರಸಿಂಹ ಕ್ಷೇತ್ರಗಳೆಲ್ಲ ಸಾಲಿಗ್ರಾಮ ಶಿಲೆಯ ಉದ್ಭವ ಮೂರ್ತಿಗಳಾಗಿವೆ.

ಸ್ವಾಮಿಯ ದೇವಾಲಯ ಭವ್ಯತೆಯಿಂದ ಕೂಡಿದ್ದು, ಸುತ್ತಲೂ ಪ್ರಾಕಾರವಿದೆ. ಗರ್ಭಗುಡಿಯ ಮುಂಭಾಗದಲ್ಲಿ 20 ಅಡಿ ಎತ್ತರದ ಕಂಬದಲ್ಲಿ ಹನುಮಂತನ ವಿಗ್ರಹವಿದೆ. ವಿನಾಯಕ, ಲಕ್ಷ್ಮೀದೇವಿ ವಿಗ್ರಹಗಳಿವೆ. ವಿಶೇಷವೆಂದರೆ ಸ್ವಾಮಿಯ ವಿಗ್ರಹವು ನಾಲ್ಕು ಕಂಬಗಳ ಮಧ್ಯಭಾಗದಲ್ಲಿದ್ದು ಕ್ರಮೇಣ ಬೆಳೆಯುತ್ತಿದೆ. ಈ ಉದ್ಭವ ಮೂರ್ತಿ ಎಡ ಹಾಗೂ ಬಲಬದಿಯಲ್ಲಿ ಶಂಕು-ಚಕ್ರಗಳು, ಕಣ್ಣು-ಬಾಯಿ, ಕೋರೆ ಮೀಸೆ ಇರುವ ಆಕೃತಿ ಸ್ಪಷ್ಟವಾಗಿ ಗೋಚರವಾಗುತ್ತದೆ. ದೇವಾಲಯದ ಈಶಾನ್ಯ ದಿಕ್ಕಿಗೆ ಅರ್ಧ ಕಿಮೀ ದೂರದಲ್ಲಿ ಒಂದು ಪುಷ್ಕರಣಿಯಿದೆ. ಇದೇ ನರಸಿಂಹ ತೀರ್ಥ. ಈ ನೀರು ಸ್ವಚ್ಛವಾಗಿದ್ದು, ಅಭಿಷೇಕ ಹಾಗೂ ಅಡುಗೆಗೆ ಪ್ರಸಾದ ತಯಾರಿಸಲು ಬಳಸುತ್ತಾರೆ.

ನಟ ಶಕ್ತಿ ಪ್ರಸಾದ್ ಕುಟುಂಬಸ್ಥರ ನೆರವಿನಿಂದ ಗ್ರಾಮಸ್ಥರು ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಸ್ಮರಣಾರ್ಥ ದೇವಸ್ಥಾನದ ಆವರಣದ ಪ್ರಾಂಗಣದ ಸುತ್ತಲೂ ಭಕ್ತರಿಗಾಗಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿನ ಪೂಜಾ ವಿಧಿ ವಿಧಾನಗಳನ್ನು ನಾಲ್ಕನೇ ತಲೆಮಾರಿನ ಆರ್ಚಕ ಓಬಳನರಸಿಂಹಯ್ಯ ನೇರೆವೇರಿಸುತ್ತಿದ್ದಾರೆ.

ಜಕ್ಕೇನಹಳ್ಳಿ ಹೆಸರು ಬರಲು ಕಾರಣ? : ದೇವಸ್ಥಾನದಲ್ಲಿ ಅಮರಶಿಲ್ಪಿ ಜಕ್ಕಣಾಚಾರಿ ನಿರ್ಮಿಸಿದ ಧ್ವಜಸ್ಥಂಭವಿದ್ದು, ಈ ದೇವಾಲಯದ ಪಾಲಕರಾಗಿ ಆಂಜನೇಯ, ಕರಿಯಣ್ಣ, ಕೆಂಪಣ್ಣ ದೇವರಿದ್ದು, ನರಸಿಂಹ ದೇವರು ಅಹೋಬಲದಿಂದ ಪಕ್ಕದ ಚಂದ್ರಗಿರಿಗೆ ಮಂಡಿಯೂರಿ ನಂತರ ದೇವಾಲಯದ ಸಮೀಪದ ಓಬಳದೇವರ ಗುಡ್ಡದಲ್ಲಿ ನರಸಿಂಹ ತೀರ್ಥವಿದ್ದು, ದೇವಾಲಯದ ಸಮೀಪ ದೇವರ ಪಾದಗಳಿವೆ. ಇದು ತಾನು ನೆಲೆಗೊಳ್ಳಲು ಶ್ರೇಷ್ಠ ಸ್ಥಳವನ್ನರಿಯಲು ನಿಂತ ಜಾಗವೆಂದು ಇತಿಹಾಸ ತಿಳಿಸುತ್ತದೆ. ಶ್ರೀಕ್ಷೇತ್ರದ ವಿಗ್ರಹವೊಂದರ ಪೀಠದ ಮುಂಭಾಗದಲ್ಲಿ ಜಕ್ಕಣಾಚಾರಿ ಚೈವಾಡಂ ಎಂಬುದಾಗಿ ತೆಲುಗಿನಲ್ಲಿ ಬರೆಯಲ್ಪಟ್ಟಿದೆ. ಇದರಿಂದ ಕೆಲಕಾಲ ಆತನು ಜಕ್ಕೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಕಾರಣ ಈ ಸ್ಥಳಕ್ಕೆ ಜಕ್ಕಣಪುರಿ ಎಂಬುದಾಗಿಯೂ ಕ್ರಮೇಣ ಜಕ್ಕೇನಹಳ್ಳಿಯಾಗಿರಬಹುದು ಎಂಬ ನಂಬಿಕೆಯಿದೆ.

ರಥೋತ್ಸವಕ್ಕೆ ಚಾಲನೆ ನೀಡುವ ಸರ್ಜಾ ಕುಟುಂಬ : ಜಾತ್ರೆ ಆರಂಭದ ದಿನದಂದು ಚಿತ್ರನಟ ದಿ.ಶಕ್ತಿಪ್ರಸಾದ್ ಕುಟುಂಬ ನಟ ಅರ್ಜುನ್‌ಸರ್ಜಾ ನೇತೃತ್ವದಲ್ಲಿ ಅಂಕುರಾರ್ಪಣಾ ಮತ್ತು ಧ್ವಜಾರೋಹಣ ಸೇವೆ ನಡೆಯಲಿದೆ. ದೇವಸ್ಥಾನದ ಗರ್ಭಗುಡಿಯಲ್ಲಿನ ಮೂಲ ಮೂರ್ತಿಗೆ ಪೂಜೆ ಸಲ್ಲಿಸಿ ಮೂರು ಪ್ರದಕ್ಷಿಣೆ ಹಾಕಿ ನಂತರ ರಥದ ಮಧ್ಯ ಭಾಗದಲ್ಲಿ ಸ್ವಾಮಿ ಪ್ರತಿಷ್ಠಾಪಿಸಿ ರಥ ಎಳೆಯುವ ಮೂಲಕ ರಥೋತ್ಸವಕ್ಕೆ ಅರ್ಜುನ್ ಸರ್ಜಾ ಚಾಲನೆ ನೀಡುತ್ತಾರೆ.

17ರಂದು ಬ್ರಹ್ಮರಥೋತ್ಸವ : ಮಾ.15ರಿಂದ 23ರವರೆಗೆ ಜಾತ್ರೆ ಹಮ್ಮಿಕೊಳ್ಳಲಾಗಿದೆ. ಮಾ.15ರಂದು ಅಂಕುರಾರ್ಪಣ ಮತ್ತು ಧ್ವಜಾರೋಹಣ, ಅಡ್ಡಪಲ್ಲಕ್ಕಿ ಉತ್ಸವ ಮತ್ತು ಭೂತಯ್ಯನ ಸೇವೆ, 16ರಂದು ಗಜೇಂದ್ರ ಮೋಕ್ಷ ಮತ್ತು ಕಲ್ಯಾಣೋತ್ಸವ, 17ರಂದು ಬ್ರಹ್ಮರಥೋತ್ಸವ, 18ರಂದು ಪಾರ್ವಾಟೋತ್ಸವ ಮತ್ತು ದವನೋತ್ಸವ, 19ರಂದು ವಸಂತೋತ್ಸವ ಮತ್ತು ಶಯನೋತ್ಸವ, 20ರಂದು ರಾತ್ರಿ ಬೊಂಬೋತ್ಸವ, 21ರಂದು ಪ್ರಾಕಾರೋತ್ಸವ, ಅನ್ನಸಂತರ್ಪಣೆ ತದಿಗೆ, 22ರಂದು ಪ್ರಾಕಾರೋತ್ಸವ, ಅನ್ನಸಂತರ್ಪಣೆ ಚತುರ್ದಶಿ ನಡೆಯಲಿದೆ.

ಕ್ಷೇತ್ರಕ್ಕೆ ಹೀಗೆ ಬನ್ನಿ; ಕ್ಷೇತ್ರಕ್ಕೆ ಬೆಂಗಳೂರಿನಿಂದ- ಮಧುಗಿರಿ ಮಾರ್ಗವಾಗಿ ಬಂದು ಬಡವನಹಳ್ಳಿ ತಲುಪಿ ಅಲ್ಲಿಂದ ಆಂಧ್ರದ ಅಗಳಿ ಮಾರ್ಗವಾಗಿ 6 ಕಿಮೀ ಕ್ರಮಿಸಿದರೆ ಜಕ್ಕೇನಹಳ್ಳಿ ಕ್ಷೇತ್ರ ತಲುಪಬಹುದು. ತುಮಕೂರಿನಿಂದ-ತೋವಿನಕೆರೆ ಮಾರ್ಗವಾಗಿ ಬಡವನಹಳ್ಳಿಗೆ ಬಂದು ಕ್ಷೇತ್ರಕ್ಕೆ ಬರಬಹುದು. ಆಂಧ್ರ ಭಾಗದಿಂದ ಅಗಳಿ-ಸಜ್ಜೆಹೊಸಹಳ್ಳಿ ಮಾರ್ಗವಾಗಿಯೂ ಹಾಗೂ ಹೊಸಕೆರೆ ರಂಟವಾಳ ಬಡವನಹಳ್ಳಿ ಮಾರ್ಗವಾಗಿ ಶ್ರೀಕ್ಷೇತ್ರಕ್ಕೆ ಬರಬಹುದು.

ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆಯುವ ಜಾತ್ರೆಯಲ್ಲಿ ಭಕ್ತರು ಭಾಗವಹಿಸುತ್ತಾರೆ, ಎಲ್ಲರೂ ಉತ್ಸವ ನಡೆಸುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತೇವೆ. ಲಕ್ಷ್ಮೀದೇವಮ್ಮ ಶಕ್ತಿ ಪ್ರಸಾದ್ ಅಧ್ಯಕ್ಷೆ, ದೇವಸ್ಥಾನದ ಆಡಳಿತ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net