ಅಶಕ್ತರಿಗೆ ಮನೆ ನಿರ್ಮಾಣಕ್ಕೆ ಕೆಕೆಎಫ್ ನೆರವು

Published on

ಮೈಸೂರು: ನಗರದಲ್ಲಿರುವ ಕೇರಳದ ನಾಗರಿಕರು ಕನ್ನಡ ಕೈರಳಿ ಫೋರಂ (ಕೆಕೆಎಫ್) ಸಂಸ್ಥೆ ಮೂಲಕ ಮನೆ ಇಲ್ಲದ ಕಡುಬಡವರಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದ್ದು, ಆ ಮೂಲಕ ಮೈಸೂರಿನ ಋಣ ತೀರಿಸಲು ಮುಂದಾಗಿದ್ದಾರೆ ಎಂದು ಕೆಕೆಎಫ್ ಫೋರಂ ಅಧ್ಯಕ್ಷ ಡಾ.ಮನು ಬಿ.ಮೆನನ್ ತಿಳಿಸಿದರು.

ಕೇರಳದಿಂದ ಬಂದು ಮೈಸೂರಿನಲ್ಲಿ ಜೀವನ ರೂಪಿಸಿಕೊಂಡಿರುವ ನಾವು ಮೈಸೂರಿನ ಋಣ ತೀರುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಮನೆ ಕಟ್ಟಿಕೊಳ್ಳಲಾಗದೆ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಮೈಸೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ಬಡ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮನೆ ನಿರ್ಮಾಣಕ್ಕೆ ನಗರಪಾಲಿಕೆ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಮನೆ ಮಾಡಿರುವ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಶಿಫಾರಸು ಹೊಂದಿರುವ ಆರ್ಥಿಕ ದುರ್ಬಲ ಕುಟುಂಬಗಳಿಗೆ ಕೇರಳ ಇಟ್ಟಿಗೆಯಲ್ಲಿ ದುಂದು ವೆಚ್ಚವಿಲ್ಲದೆ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟು ಗೌರವಯುತ ಜೀವನ ನಡೆಸಲು ನೆರವು ನೀಡಲಾಗುವುದು ಎಂದರು.

ಸೂರು ಇಲ್ಲದಿರುವ ವಸತಿ ರಹಿತ ಕುಟುಂಬಗಳು, ವಿಧವೆಯರು, ಬೇರೆಯವರ ಮೇಲೆ ಅವಲಂಬಿತರಾಗಿರುವ ಏಕ ತಾಯಂದಿರು, ಹಣಕಾಸು ಬೆಂಬಲ ಇಲ್ಲದೆ ಇರುವ ಹಿರಿಯ ನಾಗರಿಕರು, ಅಂಗವಿಕಲ ವ್ಯಕ್ತಿಗಳು, ತೀರಾ ಬಡವರಾದ ದಿನಗೂಲಿ ನೌಕರರು ಅಥವಾ ನಿರುದ್ಯೋಗಿ ವ್ಯಕ್ತಿಗಳು ಮಹದೇವಪುರ ಮುಖ್ಯ ರಸ್ತೆಯಲ್ಲಿರುವ ಕಾಳಿಸಿದ್ದನಹುಂಡಿಯ ಸರ್ಕಾರಿ ಶಾಲೆಯ ಬಳಿಯಿರುವ ಟ್ರಸ್ಟ್‌ಗೆ ಬಂದು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಟ್ರಸ್ಟ್ ಉಪಾಧ್ಯಕ್ಷ ಚಂದ್ರು ಸೇನನ್, ಉಪಾಧ್ಯಕ್ಷ ಆರ್.ಹರಿದಾಸ್, ಕಾರ್ಯದರ್ಶಿ ಪಿ.ವಿ.ಜಾರ್ಜ್, ಜಂಟಿ ಕಾರ್ಯದರ್ಶಿ ಸ್ಹಿಜು ಕೃಷ್ಣನ್, ಖಜಾಂಚಿ ರಾಧಾಕೃಷ್ಣನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net