

ವಿಮಾನ,ರೈಲು ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿದ ಕೆಕೆಸಿಸಿಐ ನಿಯೋಗ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯಲ್ಲಿ ಬಂದ್ ಆಗಿರುವ ಹಲವು ಕೈಗಾರಿಕೆಗಳನ್ನು ಮರಳಿ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಲಬುರಗಿಯ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ (ಕೆಕೆಸಿಸಿಐ) ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಅಲ್ಲದೆ ಇನ್ನೂ ಹಲವು ಬೇಡಿಕೆಗಳಿಗೆ ಸಂಬAಧಿಸಿದ ಕೇಂದ್ರ ಸಚಿವರು ಅಭಯ ನೀಡಿದ್ದಾರೆ.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್ ನೇತೃತ್ವದಲ್ಲಿ ಸದಸ್ಯರಾದ ನರೇನ್ ಪಾಟೀಲ,ಅಭಿಜೀತ್ ಪಡಶೆಟ್ಟಿ,ಶಿವರಾಜ ಇಂಗಿನಶೆಟ್ಟಿ, ಮಹಾದೇವ ಖೇಣಿ, ರವೀಚಂದ್ರ ಪಾಟೀಲ,ಸಂಪತ್ ಪಾಟೀಲ ಅವರಿದ್ದ ನಿಯೋಗ ನವದೆಹಲಿಗೆ ತೆರಳಿ ಈ ಪ್ರದೇಶದ ವಿವಿಧ ಅಭಿವೃದ್ಧಿ ಪರ ಬೇಡಿಕೆಗಳನ್ನು ಬೇಗನೇ ಈಡೇರಿಸುವ ಕುರಿತು ಕೇಂದ್ರದ ಸಂಬAಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ,ಶಹಾಬಾದದಲ್ಲಿರುವ ಜಿಇ ಪವರ್ ಇಂಡಿಯಾ ಘಟಕವನ್ನು ಮರು ಆರಂಭಿಸಬೇಕು. ಜೆ ಪಿ ಸಿಮೆಂಟ್ ಫ್ಯಾಕ್ಟರಿಯನ್ನು ಅದಾನಿ ಸಮೂಹ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಲು ಸೂಕ್ತ ಸಹಕಾರ ನೀಡಬೇಕು, ಕುರಕುಂಟಾದಲ್ಲಿರುವ ಸಿಮೆಂಟ ಕಾರ್ಪೊರೇಶನ ಆಫ್ ಇಂಡಿಯಾ ಘಟಕವನ್ನು ಮರು ಆರಂಭಿಸಲು ಒತ್ತಾಯಿಸಿದಾಗ, ಸಚಿವರು ಎಲ್ಲ ಬೇಡಿಕೆ ಆಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈಲ್ವೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮುಂಬೈ-ಸೋಲಾಪುರ ವಂದೇ ಭಾರತ ಎಕ್ಸಪ್ರೆಸ್ ರೈಲನ್ನು ಕಲಬುರಗಿವರೆಗೆ ವಿಸ್ತರಿಸಬೇಕು. ಹೈದರಾಬಾದದಿಂದ ಕಲಬುರಗಿ ಮಾರ್ಗವಾಗಿ ಮುಂಬೈವರೆಗೆ ನೂತನ ವಂದೇ ಭಾರತ ರೈಲು ಓಡಿಸಬೇಕು. ಕಲಬುರಗಿಯಲ್ಲಿ ರೈಲ್ವೆ ಡಿಪೋ ಹಾಗೂ ನನೆಗುದಿಗೆ ಬಿದ್ದ ವಿಭಾಗೀಯ ಕಚೇರಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಹೈದರಾಬಾದ ಇಂಟರ್ ಸಿಟಿ ಪುನಾರಂಭಿಸಬೇಕು.ಬೀದರ-ಕಲಬುರಗಿ-ಬೆAಗಳೂರು ರಾತ್ರಿ ಸಂಚರಿಸುತ್ತಿದ್ದ ರೈಲು, ಸೋಲಾಪುರ-ಗುಂತಕಲ್ ಇಂಟರ್ ಸಿಟಿ, ಫಲಕನಾಮಾ-ಕಲಬುರಗಿ-ಸೋಲಾಪುರ ಮರು ಆರಂಭಿಸಬೇಕು. ಫಲಕನಾಮಾ-ಕಾಚಿಗುಡಾ ಎಕ್ಸಪ್ರೆಸ್ ವಾಡಿಯಲ್ಲಿ ನಿಲ್ಲಿಸುವ ಬದಲಿಗೆ ಕಲಬುರಗಿವರೆಗೂ ವಿಸ್ತರಿಸಲು ಶಶಿಕಾಂತ ಒತ್ತಾಯಿಸಿದರು.
ನಿಯೋಗದೊಂದಿಗೆ ಮಾಜಿ ಸಂಸದ ಡಾ.ಉಮೇಶ ಜಾಧವ, ಮಾಜಿ ಸಚಿವ ಬಂಡೆಪ್ಪ ಖಾಶಂಪುರೆ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಶಿವಕುಮಾರ ಪಾಟೀಲ್ ಇತರಿದ್ದರು.
ದಕ್ಷಿಣ ಮಧ್ಯೆ ರೈಲ್ವೆಗೆ ಸೇರಿಸಿ
ವಿಜಯಪುರ-ಶಹಾಬಾದ ೧೫೭ ಕಿ.ಮೀ ಉದ್ದದ ಹೊಸ ರೈಲು ಮಾರ್ಗ ನಿರ್ಮಿಸಲು ಸಮೀಕ್ಷೆ ಮಾಡಿದ್ದು ಆರಂಭಿಸಬೇಕು. ತಾಂಡಾ ನಿವಾಸಿಗಳ ಅನುಕೂಲಕ್ಕಾಗಿ ಶಹಾಬಾದ ರೈಲು ನಿಲ್ದಾಣದಲ್ಲಿರುವ ಹಳೆಯ ಕೆಳ ಸೇತುವೆ ಆರಂಭಿಸಬೇಕು. ೨೦೧೪ ರಿಂದ ನನೆಗುದಿಗೆ ಬಿದ್ದಿರುವ ಕಲಬುರಗಿ ರೈಲ್ವೆ ವಿಭಾಗೀಯ ಕಾರ್ಯಾಲಯ ಸ್ಥಾಪಿಸಬೇಕು. ವಾಡಿ-ಕಲಬುರಗಿ-ತಾಜಸುಲ್ತಾನಪುರ ೪೫ ಕಿ. ಮೀ. ಮಾರ್ಗವನ್ನು ದಕ್ಷಿಣ ಮಧ್ಯೆ ರೈಲ್ವೆಗೆ ಸೇರ್ಪಡೆ ಮಾಡಲು ನಿಯೋಗದಲ್ಲಿದ್ದವರು ಒತ್ತಾಯಿಸಿದರು.
ಕಲಬುರಗಿಗೆ ದಶಕದವರೆಗೆ ಉಡಾನ್
ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ ನಾಯ್ಡು ಅವರನ್ನು ಭೇಟಿ ಮಾಡಿ ಕಲ್ಯಾಣ ಕರ್ನಾಟಕ ಪ್ರದೇಶವು ೩೭೧ ಜೆ ವಿಶೇಷ ಸ್ಥಾನ ಹೊಂದಿದ ಹಿಂದುಳಿದ ಪ್ರದೇಶವಾಗಿದ್ದು ಉಡಾನ್ ಯೋಜನೆ ಸೌಲಭ್ಯದಡಿ ತರಬೇಕು ಎಂದು ನಿಯೋಗ ಒತ್ತಾಯಿಸಿದಾಗ ಸಚಿವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ೧೦ ವರ್ಷಗಳ ಕಾಲ ಉಡಾನ ಸೌಲಭ್ಯವನ್ನು ಮಂಜೂರು ಮಾಡಿದರು. ಅಲ್ಲದೆ ದೆಹಲಿ-ಕಲಬುರಗಿ-ದೆಹಲಿ, ಮುಂಬಯಿ-ಕಲಬುರಗಿ-ಮುAಬಯಿ, ಮಂಗಳೂರು-ಕಲಬುರಗಿ- ಮಂಗಳೂರು, ಗೋವಾ- ಕಲಬುರಗಿ-ಗೋವಾ, ಚೆನೈ-ಕಲಬುರಗಿ-ಚೆನೈ, ತಿರುಪತಿ-ಕಲಬುರಗಿ-ತಿರುಪತಿ, ಕೊಲ್ಕತ್ತಾ-ಕಲಬುರಗಿ-ಚೆನೈ ಹೊಸ ವಿಮಾನಗಳ ಆರಂಭಿಸುವ ಜತೆಗೆ ಕಲಬುರಗಿ-ಬೆಂಗಳೂರು ನಡುವೆ ಹೆಚ್ಚಿನ ವಿಮಾನಯಾನ ಸೇವೆ ಕಲ್ಪಿಸುವ ಭರವಸೆ ಸಚಿವರು ನೀಡಿದರು.