ವಿಷ್ಣು-ಹರಿ ಶಿಲಾಫಲಕ ಪ್ರಮುಖ ಪುರಾವೆ ಅಯೋಧ್ಯೆ ಸಂಶೋಧನೆ ಬಗ್ಗೆ ಕೆ.ಕೆ.ಮಹಮ್ಮದ್ ಮಾಹಿತಿ

kk mohammadh new
Published on

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರವಿತ್ತು ಎಂಬುದಕ್ಕೆ 12ನೇ ಶತಮಾನದ ವಿಷ್ಣು-ಹರಿ ಶಿಲಾಫಲಕವೇ ಪ್ರಮುಖ ಸಾಕ್ಷೃ. ವಾಲಿ ಹಾಗೂ ದಶಾನನನನ್ನು ಕೊಂದ ವಿಷ್ಣುವಿಗೆ ಸಮರ್ಪಿತವಾದ ಈ ದೇವಸ್ಥಾನವನ್ನು ಗೋವಿಂದಚಂದ್ರ ರಾಜ ಜೀರ್ಣೋದ್ಧಾರಗೊಳಿಸಿದ ಬಗ್ಗೆ ಉಲ್ಲೇಖವಿದೆ ಎಂದು ಪುರಾತತ್ವ ಇಲಾಖೆ ಉತ್ತರ ಭಾರತದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮಹಮ್ಮದ್ ಹೇಳಿದರು.

ವಿದ್ಯೋದಯ ಶಾಲೆಯಲ್ಲಿ ಭಾನುವಾರ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

1996ರಲ್ಲಿ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಬಿ.ಬಿ.ಲಾಲ್ ನೇತೃತ್ವದಲ್ಲಿ ಬಾಬ್ರಿ ಮಸೀದಿ ಉತ್ಖನನ ಮಾಡಲಾಗಿತ್ತು. ಆ ಸಂದರ್ಭ ಮಾಧ್ಯಮಕ್ಕೆ ಇಲಾಖೆಯಿಂದ ಮಧ್ಯಂತರ ವರದಿ ಬಿಡುಗಡೆ ಮಾಡಿ, ಮಸೀದಿ ಪಶ್ಚಿಮದಲ್ಲಿ ದೊರೆತ 12 ಸ್ತಂಭಗಳು, ಅವುಗಳಲ್ಲಿದ್ದ ಹಿಂದು ದೇವಾಲಯಗಳಲ್ಲಿರುವ ಅಷ್ಟಮಂಗಲ ಚಿಹ್ನೆ, ಮಕರ, ಕೂರ್ಮ, ಅಮಲಕ ಚಿಹ್ನೆ ಪ್ರಸ್ತಾಪಿಸಲಾಗಿತ್ತು. ಇದನ್ನು ಓದಿದ ಎಡಪಂಥೀಯ ಚಿಂತಕರಾದ ರೋಮಿಲಾ ಥಾಪರ್, ಇರ್ಫಾನ್ ಹಬೀಬ್ ವರದಿಯನ್ನು ತೀವ್ರವಾಗಿ ಖಂಡಿಸಿ ಅಂದಿನ ಕೇಂದ್ರ ಸಚಿವ ನೂರುಲ್ ಹಸನ್ ಮೂಲಕ ಯೋಜನೆಯನ್ನೇ ತಡೆಹಿಡಿದರು. ನಂತರ 1996ರ ಉತ್ಖನನದಲ್ಲಿ 50 ಸ್ತಂಭ, 7 ಪಕ್ಕಾಸುಗಳು, 263 ಪ್ರತಿಮೆಗಳ ಅವಶೇಷ ಪತ್ತೆಯಾದವು. ಈ ತಂಡದಲ್ಲಿ ನಾಲ್ವರು ಮುಸ್ಲಿಂ ಅಧಿಕಾರಿಗಳಿದ್ದರು ಎಂಬುದು ವಿಶೇಷ. ಈ ಪುರಾವೆಗಳ ಆಧಾರದಲ್ಲಿ ವಿಷ್ಣು ದೇವಾಲಯವನ್ನು ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಾಗಿತ್ತು ಎಂಬ ವರದಿಯನ್ನು ಸರ್ವಾನುಮತದಿಂದ ಅನುಮೋದಿಸಲಾಗಿತ್ತು ಎಂದು ವಿವರಿಸಿದರು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್ ಮುಖ್ಯಸ್ಥ ಪ್ರೊ.ಪಾದೂರು ಶ್ರೀಪತಿ ತಂತ್ರಿ, ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ.ಕೆ.ಭೈರಪ್ಪ ಉಪಸ್ಥಿತರಿದ್ದರು.

27 ಮಂದಿರ ಕೆಡವಿ ಮಸೀದಿ

ಕುತುಬ್ ಮಿನಾರ್ ಬಳಿಯ ಕ್ವಾಯತುಲ್ ಮಸೀದಿಯನ್ನು 27 ಹಿಂದು ಮತ್ತು ಜೈನ್ ದೇವಾಲಯ ಕೆಡವಿ ಅವುಗಳ ಅವಶೇಷಗಳಿಂದ ನಿರ್ಮಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ ಎಂದು ಮಹಮ್ಮದ್ ಹೇಳಿದರು. ಹೀಗಾಗಿ ಇತಿಹಾಸವನ್ನು ನಿರಾಕರಿಸಲು ಸಾಧ್ಯವೇ ಇಲ್ಲದಷ್ಟು ಸಾಕ್ಷೃಗಳಿವೆ. ಆದರೆ ಇದಕ್ಕೆ ಇಂದಿನ ಮುಸ್ಲಿಮರನ್ನು ಹೊಣೆ ಮಾಡುವಂತಿಲ್ಲ. ಆದ್ದರಿಂದ ಭಾರತೀಯರೆಲ್ಲ ಏಕಮತದಿಂದ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.

ರಥ ಬಳಕೆಗೂ ಸಾಕ್ಷೃ ಇದೆ

ಮಹಾಭಾರತದಲ್ಲಿ ರಥ ಬಳಕೆ ಮಾಡಲಾಗಿತ್ತು ಎಂಬುದಕ್ಕೆ ಈವರೆಗೆ ಸಾಕ್ಷೃ ಲಭ್ಯವಿರಲಿಲ್ಲ. 2018ರಲ್ಲಿ ಸಿಮೋಲಿಯಲ್ಲಿ ನಡೆದ ಉತ್ಖನನ ವೇಳೆ ರಥದ ಚಕ್ರಗಳ ಅವಶೇಷಗಳನ್ನು ಪುರಾತತ್ವ ಇಲಾಖೆ ಪತ್ತೆ ಹಚ್ಚಿದೆ. ಅನೇಕ ಕಬ್ಬಿಣದ ಆಯುಧಗಳೂ ಲಭಿಸಿವೆ ಎಂದು ಮಹಮ್ಮದ್ ಮಾಹಿತಿ ನೀಡಿದರು.

ಪುರಾತತ್ವ ಇಲಾಖೆಯತ್ತ ಕೇಂದ್ರ ನಿರ್ಲಕ್ಷೃ

ಕಾಂಗ್ರೆಸ್ ಅವಧಿಗೆ ಹೋಲಿಸಿದರೆ ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪುರಾತತ್ವ ಇಲಾಖೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿಲ್ಲ. ಅನೇಕ ಸಂದರ್ಭದಲ್ಲಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ ಎಂದು ಮಹಮ್ಮದ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ ಕಾಲದಲ್ಲಿ ಪ್ರೋತ್ಸಾಹವಿತ್ತು ಎಂದರು. ಕಾಶೀ ಮತ್ತು ಮಥುರಾ ವಿವಾದದ ಬಗ್ಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ 1991ರಲ್ಲಿ ಧಾರ್ಮಿಕ ಪೂಜಾ ಸ್ಥಳ ಸಂರಕ್ಷಣಾ ಕಾಯ್ದೆ ಮೂಲಕ ಅಯೋಧ್ಯೆ ಹೊರತುಪಡಿಸಿ ಉಳಿದ ಕಡೆಗಳಲ್ಲಿ 1947ರ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿದೆ. ಆದರೆ ಮುಸ್ಲಿಮರೇ ಸ್ವ ಇಚ್ಛೆಯಿಂದ ಹಸ್ತಾಂತರ ಮಾಡಬಹುದು. ಅದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ಎಂದರು. ಅಯೋಧ್ಯೆ ವಿವಾದಿತ ಜಾಗ ಎಂಬ ರಾಜಕಾರಣಿಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಮ್ಮದ್, ರಾಮಜನ್ಮಭೂಮಿ ವಿವಾದಿತ ಜಾಗವಲ್ಲ ಎಂದರು.

ಸತ್ಯದ ಮುಖ ಬಣ್ಣಗಳ ಆವರಣದಿಂದ ಮುಚ್ಚಲ್ಪಡಬಾರದು. ಸುಳ್ಳನ್ನು ಸತ್ಯವೆಂದು ತಿಳಿದುಕೊಂಡರೆ ಅನರ್ಥವಾಗುತ್ತದೆ. ಹೀಗಾಗಿ ನಿರ್ಭೀತಿಯಿಂದ ಸತ್ಯ ಹೇಳುವ ಅವಶ್ಯಕತೆ ಇದೆ. ವಿಶ್ವದಲ್ಲಿ ಸ್ವಭಾವತಃ ಒಳ್ಳೆಯವರು ಮತ್ತು ಸ್ವಭಾವತಃ ದುಷ್ಟರು ಎಂಬ ವರ್ಗಗಳಿವೆ. ಆದ್ದರಿಂದ ಜನಾಂಗವನ್ನು ಪೂರ್ತಿಯಾಗಿ ದೂಷಿಸದೆ ಎಲ್ಲ ಸಮುದಾಯದ ಸಜ್ಜನರನ್ನು ಒಗ್ಗೂಡಿಸುವ ಅಗತ್ಯವಿದೆ.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net