

ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಪಟ್ಟಣ ಪಂಚಾಯಿತಿ ಬಳಿ ಬುಧವಾರ ಸುಂಕ ಸಂಗ್ರಹ ಗುತ್ತಿಗೆ ಹರಾಜು ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿ 12 ಗಂಟೆಗೆ ಆರಂಭವಾಗಬೇಕಿದ್ದ ಸಭೆ 1 ಗಂಟೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯಿತು.
ಹುಳಿಯಾರು ಪಪಂನ ಹುಣಸೇಮರದ ಫಸಲು, ವಾರದ ಸಂತೆ ಸುಂಕ, ಖಾಸಗಿ ಬಸ್ ಸುಂಕ ಹಾಗೂ ಫುಟ್‌ಪಾತ್ ಅಂಗಡಿಗಳ ಸುಂಕ ವಸೂಲಿಗೆ ಸಂಬಂಧಿಸಿದಂತೆ ಬುಧವಾರ ಪಂಚಾಯಿತಿ ಆವರಣದಲ್ಲಿ ಸಭೆ ಕರೆಯಲಾಗಿತ್ತು. ಸಭೆಗೆ ಆಗಮಿಸಿದ್ದ ಕಳೆದ ಸಾಲಿನ ಸುಂಕ ಸಂಗ್ರಹ ಗುತ್ತಿಗೆದಾರರು ಕರೊನಾ ಹಾಗೂ ಲಾಕ್‌ಡೌನ್ ಪರಿಣಾಮ ಪಂಚಾಯಿತಿ ನಿಗದಿಪಡಿಸಿದಷ್ಟು ಸುಂಕ ಸಂಗ್ರಹವಾಗಿಲ್ಲ. ಈ ಗುತ್ತಿಗೆ ಮಾಡಿಕೊಂಡ ನಮಗೆ ಬಾರಿ ನಷ್ಟವಾಗಿದ್ದು, ಮುಂದಿನ ಆರು ತಿಂಗಳು ಸುಂಕ ಸಂಗ್ರಹಕ್ಕೆ ಅನುಮತಿ ನೀಡಬೇಕು ಅಥವಾ ನಷ್ಟದ ಹಣ ತಮಗೆ ಹಿಂದಿರುಗಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಪಂಚಾಯಿತಿ ಅಧ್ಯಕ್ಷ ಕೆ.ಎಂ.ಎಲ್ ಕಿರಣ್ ಅವರು ಮೊದಲೇ ಮನವಿ ಕೊಟ್ಟಿದ್ದರೆ ಸಾಮಾನ್ಯ ಸಭೆಯಲ್ಲಿಟ್ಟು ಸದಸ್ಯರ ಒಪ್ಪಿಗೆ ಪಡೆದು ತೀರ್ಮಾನ ಕೈಗೊಳ್ಳಬಹುದಿತ್ತು. ಆದರೆ ದಿಢೀರ್ ಹರಾಜಿನ ಸಮಯದಲ್ಲಿ ಬಂದು ಕೇಳಿದರೆ ಕಷ್ಟಸಾಧ್ಯ ಎಂದರು. ಇದಕ್ಕೆ ಗುತ್ತಿಗೆದಾರ ಶಿವಣ್ಣ ಏಳೆಂಟು ಬಾರಿ ಮನವಿ ಕೊಟ್ಟಿದ್ದು ಇದುವರೆಗೂ ಸ್ಪಂದಿಸಿಲ್ಲ ಎಂದರು.
ಮುಖ್ಯಾಧಿಕಾರಿ ಮಂಜುನಾಥ್ ಅವರು ಹರಾಜಿನ ನಿಬಂಧನೆಗಳ ಪ್ರಕಾರ ರೋಗ-ರುಜಿನ, ಮಳೆ, ಅಗ್ನಿದುರಂತ ಹೀಗೆ ಅನೇಕ ಸನ್ನಿವೇಶಗಳಿಂದ ಉಂಟಾಗುವ ನಷ್ಟಕ್ಕೆ ಪಂಚಾಯಿತಿ ಜವಾಬ್ದಾರವಲ್ಲ ಹಾಗೂ ಪರಿಹಾರ ನೀಡುವುದಿಲ್ಲ. ಈ ನಿಬಂಧನೆಗಳಿಗೆ ಒಪ್ಪಿಯೇ ಇವರು ಹರಾಜು ಕೂಗಿರುವುದರಿಂದ ಯಾವ ಪರಿಹಾರವನ್ನೂ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಗುತ್ತಿಗೆದಾರ ಶಿವಣ್ಣ ಪರ ಬೆಂಕಿ ಬಸವರಾಜು ಮಾತನಾಡಿ, ಬೇಲೂರು, ಗುಬ್ಬಿ ಸೇರಿ ಅನೇಕ ಪಂಚಾಯಿತಿಗಳಲ್ಲಿ ಕರೊನಾ ನಷ್ಟ ಪರಿಹಾರ ನೀಡಲಾಗಿದೆ ಎಂದು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು. ಆದರೆ ಮುಖ್ಯಾಧಿಕಾರಿ ನಮ್ಮಲ್ಲಿ ಕೊಡಲು ಸಾಧ್ಯವಿಲ್ಲ ಎಂದರು. ಇದರಿಂದ ವಿಚಲಿತರಾದ ಗುತ್ತಿಗೆದಾರ ಶಿವಣ್ಣ ನನಗೆ ಪರಿಹಾರ ಕೊಡದೆ ಹರಾಜು ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದರು.
ಕೈಕೈ ಮಿಲಾಯಿಸಿದ ಮುಖ್ಯಾಧಿಕಾರಿ, ಗುತ್ತಿಗೆದಾರ : ಹರಾಜು ಸಂಬಂಧ ಠೇವಣಿ ಕಟ್ಟಿಸಿಕೊಳ್ಳುತ್ತಿದ್ದ ಪುಸ್ತಕ ಕಿತ್ತುಕೊಳ್ಳಲು ಶಿವಣ್ಣ ಮುಂದಾದಾಗ ಮುಖ್ಯಾಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಆದರೂ ಶಿವಣ್ಣನ ವಾಗ್ದಾಳಿ ಮುಂದುವರಿದು ಮುಖ್ಯಾಧಿಕಾರಿಗಳ ಹೆಂಡತಿ, ಮಕ್ಕಳನ್ನೂ ಬೈದರು. ಇದರಿಂದ ಆಕ್ರೋಶಗೊಂಡ ಮುಖ್ಯಾಧಿಕಾರಿ ಹೆಂಡತಿ, ಮಕ್ಕಳ ವಿಷಯಕ್ಕೆ ಬರ‌್ತಿಯ ಎಂದು ಶಿವಣ್ಣನ ಮೇಲೆರಗಿದರು.
ಆಗ ಶಿವಣ್ಣ ಜಗಳಕ್ಕೆ ಬಿದ್ದರು. ಇಬ್ಬರೂ ಕೈಕೈ ಮಿಲಾಯಿಸಿದಾಗ ಅಲ್ಲಿದ್ದ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಬಿಡಿಸಿದರು. ಆದರೂ ಇಬ್ಬರ ನಡುವೆ ವಾಗ್ಯುದ್ಧ ನಡೆಯುತ್ತಲೆ ಇತ್ತಾದರೂ ಹರಾಜು ಸಭೆ ಆರಂಭವಾಗಲಿಲ್ಲ. ಅಷ್ಟರಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಸಮಾಧಾನ ಪಡಿಸಿದರಲ್ಲದೆ ಹರಾಜು ಪ್ರಕ್ರಿಯೆ ಆರಂಭಿಸಿದರು. ಮಧ್ಯಾಹ್ನ 3 ಗಂಟೆಯವರೆವಿಗೂ ಹರಾಜು ಪ್ರಕ್ರಿಯೆ ನಡೆದು ಕಳೆದ ವರ್ಷಗಳಿಗಿಂತ ಈ ವರ್ಷ ಕಡಿಮೆ ಬಿಡ್‌ಗೆ ಹರಾಜು ನಡೆಯಿತು. ಹುಣಸೇಮರದ ಫಸಲು ಹರಾಜು 12 ಸಾವಿರ ರೂಪಾಯಿಗೆ ಮೋಹನ್ ಕುಮಾರ್ ಅವರಿಗೆ, ಖಾಸಗಿ ಬಸ್ ಸುಂಕ 1,25,000 ರೂಗಳಿಗೆ ಮಿಲ್ಟ್ರಿ ಶಿವಣ್ಣ ಅವರಿಗೆ, ವಾರದ ಸಂತೆ 1,20,000 ರೂಪಾಯಿಗೆ ರಮೇಶ ಅವರಿಗೆ, ಫುಟ್‌ಪಾತ್ ಅಂಗಡಿಗಳ ಸುಂಕ ಸಂಗ್ರಹ 5,50,000 ರೂಗಳಿಗೆ ಚನ್ನಕೇಶವ ಅವರಿಗೆ ಹರಾಜು ನಿಂತಿತು.
ಬಸ್ ನಿಲ್ದಾಣದ ಸುತ್ತ ವ್ಯಾಪಾರಕ್ಕೆ ಅವಕಾಶವಿಲ್ಲ ; ಖಾಸಗಿ ಬಸ್ ನಿಲ್ದಾಣದ ಸುತ್ತ ತಳ್ಳುವಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಬಸ್ ಹತ್ತಲು, ಇಳಿಯಲು ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಹಿಂದೆಯೂ ಇಲ್ಲಿಯ ತಳ್ಳುವ ಗಾಡಿಗಳನ್ನು ಎತ್ತಿಸಲಾಗಿತ್ತು. ಈಗ ಮತ್ತೆ ಬಸ್ ನಿಲ್ದಾಣದ ಸುತ್ತ ತಳ್ಳುವಗಾಡಿಗಳನ್ನು ಎತ್ತಂಗಡಿ ಮಾಡಲಾಗುವುದು. ಹಾಗಾಗಿ ಫುಟ್‌ಪಾತ್ ಸುಂಕ ಸಂಗ್ರಹ ಗುತ್ತಿಗೆ ಪಡೆಯುವವರು ಇವುಗಳನ್ನು ಬಿಟ್ಟು ಉಳಿದ ಫುಟ್‌ಪಾತ್ ಅಂಗಡಿಗಳನ್ನು ಲೆಕ್ಕಹಾಕಿ ಬಿಡ್‌ನಲ್ಲಿ ಭಾಗವಹಿಸಬೇಕು ಎಂದು ಪಪಂ ಅಧ್ಯಕ್ಷ ಕೆ.ಎಂ.ಎಲ್.ಕಿರಣ್ ತಿಳಿಸಿದರು.
ಹುಳಿಯಾರು ಪಟ್ಟಣದಲ್ಲಿ ಹಾಲಿ ನಡೆಯುತ್ತಿರುವ ವಾರದ ಸಂತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ದೂರು ಕೇಳಿಬಂದಿದೆ. ಹಾಗಾಗಿ ಯಾವ ಕ್ಷಣದಲ್ಲಾದರೂ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಲಾಗುವುದು. ಸ್ಥಳಾಂತರ ಗೊಂಡ ವಾರದಿಂದ ಉಳಿದ ವಾರದ ಹಣವನ್ನು ಪಂಚಾಯಿತಿ ಹಿಂದಿರುಗಿಸಲಿದೆ.
ಕೆ.ಎಂ.ಎಲ್ ಕಿರಣ್, ಪಪಂ ಅಧ್ಯಕ್ಷ