ಡಿಂಕನಹಳ್ಳಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ಬೇಡ : ಮಾಜಿ ಶಾಸಕ ಸಿ.ಬಿ ಸುರೇಶ್ ಬಾಬುಗೆ ಚರ್ಚೆ ; ಬರಡುಭೂಮಿಯಲ್ಲಿ ಯೋಜನೆಗೆ ಕೈ ಹಾಕಿ

8HULIYAR3
Published on

ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಡಿಂಕನಹಳ್ಳಿಯಲ್ಲಿ 400 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ವಿರೋಧ ವ್ಯಕ್ತಪಡಿಸಿರುವ ರೈತರು ಮಂಗಳವಾರ ಗ್ರಾಮದಲ್ಲಿ ಮಾಜಿ ಶಾಸಕ ಸಿ.ಬಿ ಸುರೇಶ್ ಬಾಬು ಅವರೊಂದಿಗೆ ಚರ್ಚಿಸಿ ಅಹವಾಲು ಸಲ್ಲಿಸಿದರು.

ಯೋಜನೆಗೆ ಭೂಮಿ ನೀಡಲು ಒಪ್ಪಿಲ್ಲ ಎಂದು ಹಲವು ರೈತರು ಜಿಲ್ಲಾಧಿಕಾರಿಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಡಿಂಕನಹಳ್ಳಿ ಶಾಲೆಯ ಮುಂಭಾಗದ ಸ.ನಂ.45, 46, 47ರಲ್ಲಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಕಚೇರಿಯಲ್ಲಿ, ಜಿಲ್ಲಾಧಿಕಾರಿ ಸಭೆಯಲ್ಲಿ ಭೂಮಾಲಿಕರ ರೈತರ ಸಭೆ ಕರೆದಿದ್ದು, ಸಭೆಗೆ ಹಾಜರಾದ ರೈತರ ಸಹಿ ತೋರಿಸಿ ರೈತರು ಭೂಮಿ ನೀಡಲು ಒಪ್ಪಿರುತ್ತಾರೆ ಎಂದು ದಾಖಲೆ ಸೃಷ್ಟಿಸಿದ್ದಾರೆ ಎಂದು ರೈತರು ಆರೋಪಿಸಿದರು.

ಯೋಜನೆಗೆ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಕೋರಿ 17 ಮಂದಿ ತಿಪಟೂರಿನ ಭೂಸ್ವಾಧೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಪ್ರತಿವಾದಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಸ್ಥಾವರ ಸ್ಥಾಪಿಸುವ ಸ್ಥಳದಿಂದ 400ರಿಂದ 800 ಮೀಟರ್ ಅಂತರದಲ್ಲಿ ಡಿಂಕನಹಳ್ಳಿ, ಅರಳಿಕೆರೆ, ಸಾಲಾಪುರ, ಅಜ್ಜನ ಪಾಳ್ಯ, ಮೋಟಿಹಳ್ಳಿ, ಚಿಕ್ಕ ಎಣ್ಣೆಗೆರೆ, ದೊಡ್ಡ ಎಣ್ಣೆಗೆರೆ, ಉಪ್ಪಿನ ಕಟ್ಟೆ, ಕೋರಗೆರೆ, ಹನುಮಂತಪುರ, ಎಮ್ಮೆಹಟ್ಟಿ,ಅರಳಿಕೆರೆ ಕಾಲನಿ ಹೀಗೆ ಹತ್ತು-ಹನ್ನೆರಡು ಹಳ್ಳಿಗಳಿದ್ದು, ಸ್ಥಾವರ ಇಲ್ಲಿಯೇ ಸ್ಥಾಪಿಸಿದಲ್ಲಿ ಐದು ಸಾವಿರ ಕುಟುಂಬಗಳಿಗೆ ತೊಂದರೆ ಆಗಲಿದೆ ಎಂದು ರೈತರು ದೂರಿದರು.

ಇದಕ್ಕೆ ಸ್ಪಂದಿಸಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು, ಡಿಂಕನಹಳ್ಳಿಯಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಇಲ್ಲಿ ಯಾರ ವಿರೋಧವೂ ಇಲ್ಲ, ಆದರೆ ಉದ್ದೇಶಿತ ಸ್ಥಳದ ಮೊದಲು ಬೇರೆಡೆ ಸ್ಥಾಪಿಸಿ ಎನ್ನುವುದಷ್ಟೆ ನಮ್ಮ ಕೋರಿಕೆ ಎಂದರು. ಇಲ್ಲಿನ ರೈತರಿಗೆ ತಾತ ಮುತ್ತಾತನ ಕಾಲದಿಂದಲೂ ಅಂಗೈಯಷ್ಟು ಜಮೀನಿದ್ದು, ಇಲ್ಲಿನ ಜನರು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇವರನ್ನು ಇಲ್ಲಿಂದ ಒಕ್ಕಲೆಬ್ಬಿಸಿ ಬೇಡಿ ಎನ್ನುವುದಷ್ಟೇ ನಮ್ಮ ಬೇಡಿಕೆ. ಸಚಿವರು ವೈಯಕ್ತಿಕ ನಿಲುವು ಬದಲಿಸಿ ಇಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಅರಳಿಕೆರೆ ಗಂಗಾಧರಪ್ಪ, ಡಿಂಕನಹಳ್ಳಿ ಮಾಸ್ಟರ್ ರಾಜಣ್ಣ, ಅರಳಿಕೆರೆ ಪ್ರಕಾಶ್, ತಾಪಂ ಮಾಜಿ ಸದಸ್ಯೆ ಹೇಮಕ್ಕ, ಹಂದನಕೆರೆ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ದೊಡ್ಡ ಎಣ್ಣೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ ಮಂಜುನಾಥ್, ಉಪಾಧ್ಯಕ್ಷೆ ಅನಸೂಯಮ್ಮ, ಸದಸ್ಯೆ ಕಾವ್ಯಾ ಸೇರಿ ಸುತ್ತಲಿನ ಹತ್ತಾರು ಹಳ್ಳಿಯ ರೈತರು ಇದ್ದರು.

ಇಲ್ಲಿನ ರೈತರ ಸಮಸ್ಯೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಗಮನಕ್ಕೆ ತಂದಿದ್ದು, ಕುಮಾರಸ್ವಾಮಿ ಅವರು ನಾಳೆ ನಡೆಯಲಿರುವ ಅಧಿವೇಶನದಲ್ಲಿ ಧ್ವನಿಎತ್ತಲಿದ್ದಾರೆ. ಸಿ.ಬಿ.ಸುರೇಶ್‌ಬಾಬು ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net