

ಹೈದರ್ ಕುಂದಾಣ
ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ ಲ್ಯಾಬ್, ಓಪಿಡಿ, ಸ್ಟೋರ್ ರೂಂ, ಮೀಟಿಂಗ್‌ಹಾಲ್, ಶೌಚಗೃಹ ಸೇರಿ ಕನಿಷ್ಠ ಮೂಲಸೌಲಭ್ಯ ಹಾಗೂ ಅಗತ್ಯ ಸಿಬ್ಬಂದಿ ಇರಬೇಕೆಂಬ ನಿಯಮವಿದೆ. ಆದರೆ ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಕಾರಹಳ್ಳಿಯಲ್ಲಿರುವ ಆರೋಗ್ಯ ಕೇಂದ್ರ ಇದಕ್ಕೆ ಅಪವಾದವೆಂಬಂತಿದೆ.
ಇಷ್ಟೇ ಅಲ್ಲದೆ ತಾಲೂಕಿನ ಇತರ ಗ್ರಾಪಂನಲ್ಲಿ ಪ್ರಾಥಮಿಕ ಕೇಂದ್ರಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿವೆ. ಆದರೆ ಕಾರಹಳ್ಳಿ ಕೇಂದ್ರ 46*36 ವಿಸ್ತೀರ್ಣದ 4 ಕಿಷ್ಕಿಂಧೆಯಂತಹ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಾಮಾಜಿಕ ಅಂತರವೂ ಅಸಾಧ್ಯ: ವೈದ್ಯಾಧಿಕಾರಿ ಸೇರಿ 11 ಸಿಬ್ಬಂದಿಯಿದ್ದು, ಇವರೆಲ್ಲ ಒಮ್ಮೆಲೆ ಆಸ್ಪತ್ರೆಗೆ ಬಂದರೆ ಸಾಮಾಜಿಕ ಅಂತರಕ್ಕೂ ಸ್ಥಳವಿಲ್ಲದ ಪರಿಸ್ಥಿತಿ ಇದೆ. ಕೇಂದ್ರದ ಯಾವುದೇ ಸಭೆಗಳಿದ್ದರೂ 100 ಮೀಟರ್ ದೂರದಲ್ಲಿರುವ ಸಮುದಾಯ ಭವನ ಆಶ್ರಯಿಸಬೇಕಿದೆ.
ಕಾರಹಳ್ಳಿ ಹಿಂದಿನಿಂದಲೂ ರಾಜಕೀಯವಾಗಿ ಪ್ರಭಾವಿ ಗ್ರಾಮವೆಂದೇ ಗುರುತಿಸಿಕೊಂಡಿದೆ. ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಆಸ್ಪತ್ರೆ ಕಡೆಗಣನೆಗೆ ತುತ್ತಾಗಿದೆ.
ಸ್ವಚ್ಛತೆಯೂ ಇಲ್ಲ: ಗ್ರಾಪಂ ಜಾಗದಲ್ಲಿ ಆರೋಗ್ಯ ಕೇಂದ್ರವಿದ್ದು, ಮಳೆಗಾಲದಲ್ಲಿ ನೀರು ನುಗ್ಗುತ್ತದೆ. ಆಸ್ಪತ್ರೆ ಪಕ್ಕದ ಜನ ದನ, ಕುರಿ ಕಟ್ಟಲು ಕಾಂಪೌಂಡ್ ಬಳಸುತ್ತಿರುವುದರಿಂದ ಕೇಂದ್ರದ ಸುತ್ತಲೂ ಸ್ವಚ್ಛತೆ ಇಲ್ಲದಂತಾಗಿದೆ.
ಹಲವು ಬಾರಿ ಸಂಬಂಧಪಟ್ಟವರಿಗೆ ಆರೋಗ್ಯ ಕೇಂದ್ರದ ಕುಂದುಕೊರತೆ ಬಗ್ಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಬೇರೆ ಕಟ್ಟಡ ನಿರ್ಮಾಣದ ನಿರೀಕ್ಷೆ ಇದೆ. ಕೆ.ಎಸ್.ಧನಂಜಯ್, ವೈದ್ಯಾಧಿಕಾರಿ 20 ವರ್ಷದಿಂದ ಇದೇ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಸ್ಥಳಾಂತರಿಸುವ ಪ್ರಯತ್ನ ಸಲವಾಗಿಲ್ಲ. ಜನಪ್ರತಿನಿಧಿಗಳು ಗಮನ ನೀಡಿ, ಉತ್ತಮ ಆರೋಗ್ಯ ಸೇವೆಗೆ ಅವಕಾಶ ಮಾಡಿಕೊಡಬೇಕು. ದಿವಾನಪ್ಪ, ಕಾರಹಳ್ಳಿ ಗ್ರಾಮಸ್ಥ