ವಿಶ್ವಕ್ಕೆ ಮಾನವ ಸಂದೇಶ ಕೊಟ್ಟ ರಾಷ್ಟ್ರಕವಿ ಕುವೆಂಪು: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.

IMG-20231229-WA0005
Published on

ಗದಗ: ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಶುಕ್ರವಾರದಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು  ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಉದ್ಘಾಟಿಸಿದರು.  

ಹಿರಿಯ ಸಾಹಿತಿಗಳಾದ ಅಂದಾನಪ್ಪ ವಿಭೂತಿ ಅವರು ಮಾತನಾಡಿ ರಾಷ್ಟ್ರಕವಿ ಕುವೆಂಪುರವರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ ವಿಶ್ವಕ್ಕೆ ಮಾನವ ಸಂದೇಶವನ್ನು ಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಕೃಷಿಯ ಬದುಕು ಅವಲೋಕನ ಮಾಡಬೇಕಾಗಿದೆ.  ರಾಷ್ಟ್ರಕವಿ ಕುವೆಂಪುರವರು 1904 ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929 ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ಮಹಾರಾಜಾ ಕಾಲೇಜನ್ನು ಸೇರಿದ ಅವರು 1955 ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ರಾಷ್ಟ್ರಕವಿ ಕುವೆಂಪು ಅವರ ಬದುಕು ಸರ್ವರಿಗೂ ಅನುಕರಣೀಯವಾಗಿದೆ ಎಂದರು.  

ಕುವೆಂಪು ಅವರು ಬರೆದ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕುವೆಂಪುರವರು ನಿಸರ್ಗ ಪ್ರೇಮ , ಆಧ್ಯಾತ್ಮಿಕತೆ,  ವೈಚಾರಿಕತೆ , ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದರು.  ಮನುಜಮತ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರಗಳ ದೃಷ್ಟಿಕೋನ ಹೊಂದಿದವರಾಗಿದ್ದರು ಎಂದು ವಿವರಿಸಿದ ಅಂದಾನಪ್ಪ ವಿಭೂತಿ ಅವರು  ಇಂದಿನ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಕುವೆಂಪು ಅವರ ಜನ್ಮಸ್ಥಳಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಬೇಕೆಂದರು.  

ಇದೇ ಸಂದರ್ಭದಲ್ಲಿ ಕುವೆಂಪು ಅವರ ಜನ್ಮದಿನದ ನಿಮಿತ್ತ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಪ್ರೊ.ಕೆ.ಎಚ್.ಬೇಲೂರ, ಮೌನೇಶ ಬಡಿಗೇರ, ವಿವಿಧ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು ಆಗಮಿಸಿದ್ದರು.

ಪಂಡಿತ ವೆಂಕಟೇಶ ಅಲ್ಕೋಡ ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ವಂದಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net