

ರಾವಂದೂರು: ಪಿರಿಯಾಪಟ್ಟಣ ತಾಲೂಕು ಕಿತ್ತೂರು ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಸಚಿವ ವೆಂಕಟೇಶ್, ಸಂಸದ ಪ್ರತಾಪ ಸಿಂಹ 15 ನಿಮಿಷಗಳ ಅಂತರದಲ್ಲಿ ಪ್ರತ್ಯೇಕವಾಗಿ ಉದ್ಘಾಟಿಸಿದರು.
ಸೇವಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮ 10.30ಕ್ಕೆ ನಿಗದಿಯಾಗಿತ್ತು. ನಿಗದಿತ ಸಮಯಕ್ಕೆ ಬಂದ ಸಚಿವ ಕೆ. ವೆಂಕಟೇಶ್ ಕೇಂದ್ರವನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದರು. ಈ ವೇಳೆ 15 ನಿಮಿಷ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.
ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ: ಕಿತ್ತೂರು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಕಿತ್ತೂರು ಗ್ರಾಮದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಂತ-ಹಂತವಾಗಿ ಕ್ರಮವಹಿಸುವುದಾಗಿ ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಕೃಷ್ಣಪ್ಪ, ವೆಂಕಟೇಶ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ವಿ.ಜಿ. ಕೊಪ್ಪಲು ಲೋಕೇಶ್, ಸರಸ್ವತಿ, ಗ್ರಾ.ಪಂ. ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಪದ್ಮಾವತಿ, ಜಗದೀಶ್, ದೀಪಕ್, ಇ.ಒ. ಸುನೀಲ್, ಪಿಡಿಒ ರಾಜಶೇಖರ್ ಇತರರು ಇದ್ದರು.
ಜೋಡೆತ್ತುಗಳ ರೀತಿಯಲ್ಲಿ ಅಭಿವೃದ್ಧಿ
ಮಾಜಿ ಶಾಸಕ ಕೆ.ಮಹದೇವ್ ಹಾಗೂ ನಾನು ಜೋಡೆತ್ತುಗಳಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಕೇಂದ್ರ ಸರ್ಕಾರದಿಂದ ಜಲಜೀವನ್ ಮಿಷನ್‌ಗೆ ಅನುದಾನ ತಂದು ಪ್ರತಿ ಗ್ರಾಮಕ್ಕೆ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಸಲು ಯೋಜನೆ ಪ್ರಗತಿಯಲ್ಲಿದೆ. ಮೈಸೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ವಿಮಾನ ನಿಲ್ದಾಣ, ನೂತನ ರೈಲ್ವೆ ನಿಲ್ದಾಣ, ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ನಿಗದಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಅನಧಿಕೃತ ತಂಬಾಕು ಬೆಳೆಗಾರರಿಗೆ ಲೈಸೆನ್ಸ್ ನೀಡಲಾಗುವುದು ಎಂದರು.
ಆರ್.ಟಿ. ಸತೀಶ್, ರಾಜೇಗೌಡ, ಶಶಿ ಇತರರು ಇದ್ದರು.