ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ, ಬೃಹತ್ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ

CHENNAMMA JAYANTI
ವಿಜಯಪುರದ ಸಿದ್ಧೇಶ್ವರ ದೇವಸ್ಥಾನದ ಎದುರು ರಾಣಿ ಚೆನ್ನಮ್ಮ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು. ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಜಿಪಂ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ ಮತ್ತಿತರರಿದ್ದಾರೆ.
Published on

ವಿಜಯಪುರ: ನಾಡು-ನುಡಿಗಾಗಿ, ಸಮಾಜ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶ ವಿಚಾರಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಭಿಪ್ರಾಯಿಸಿದರು.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ದೇಶದ ಇತಿಹಾಸದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರ ಹೋರಾಟ ಅವಿಸ್ಮರಣೀಯ. ಚೆನ್ನಮ್ಮನ ಸ್ವಾಭಿಮಾನ ಮತ್ತು ದೇಶಾಭಿಮಾನ ಇಂದಿನ ಪೀಳಿಗೆ ಅರಿತು ಅಳವಡಿಸಿಕೊಳ್ಳಬೇಕೆಂದರು.

ಕಿತ್ತೂರು ಚೆನ್ನಮ್ಮ ಅವರು ಮಾಡಿದ ಕಾರ್ಯಗಳಿಂದ ಇತಿಹಾಸದ ಪುಟದಲ್ಲಿ ಅವರು ಅಜರಾಮರವಾಗಿದ್ದಾರೆ. ಇಂತಹ ಮಹನೀಯರ ಕುರಿತಾಗಿ ಅಧ್ಯಯನ ಮಾಡುವ ಮೂಲಕ ಮತ್ತಷ್ಟು ತಿಳಿದುಕೊಳ್ಳಬೇಕು. ಧೈರ್ಯ ಶೌರ್ಯ ಕೆಚ್ಚೆದೆಯ ಹೋರಾಟದ ಕಿತ್ತೂರು ಚೆನ್ನಮ್ಮ ಗುಣಗಳನ್ನು ಅಳವಡಿಸಿಕೊಂಡು ಬೆಳೆಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಮಹನೀಯರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಉಪನ್ಯಾಸ ನೀಡುತ್ತಾ, ಕಿತ್ತೂರಿನಲ್ಲಿ ನಡೆದ ಮೊಟ್ಟ ಮೊದಲ ಹೋರಾಟ ಬ್ರಿಟೀಷ್‌ರಿಗೆ ಸೋಲಿನ ಕಹಿಯನ್ನು ನೀಡಿತ್ತು. ಬಲಿಷ್ಠವಾದ ಸೈನ್ಯ ಹೊಂದಿದ್ದ ಬ್ರಿಟೀಷ್‌ರ ವಿರುದ್ಧ ಕೆಚ್ಚೆದೆಯಿಂದ ಹೋರಾಡಲು ಚೆನ್ನಮ್ಮನ ಹೃದಯದಲ್ಲಿ ತುಂಬಿಕೊಂಡಿರುವ ನಾಡ ಭಕ್ತಿ, ನಾಡ ಪ್ರೇಮವೇ ಪ್ರೇರಣೆ. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬುದರ ವಿರುದ್ದ ಮೊದಲು ಸಿಡಿದೆದ್ದ ಸಂಸ್ಥಾನ ಕಿತ್ತೂರು. ಇದು ಹೋರಾಟಕ್ಕೆ ನಾಂದಿಯಾಯಿತು. ಕೆಚ್ಚೆದೆಯಿಂದ ಪುಟ್ಟ ಸಂಸ್ಥಾನದ ಉಳಿವಿಗಾಗಿ ಧೈರ್ಯ-ಶೌರ್ಯದಿಂದ ಹೋರಾಡಿದ ಚೆನ್ನಮ್ಮ ಓರ್ವ ಕನ್ನಡತಿ ಎಂಬುದು ನಮಗೆ ಹೆಮ್ಮೆ. ಸರದಾರ ಗುರುಸಿದ್ಧಪ್ಪ, ಅಮಟೂರ ಬಾಳಪ್ಪ ಅವರು ಕಿತ್ತೂರು ಸೈನ್ಯದ ನಾಯಕರಾಗಿ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.

ಧೂಳಪ್ಪಗೌಡ ದೇಸಾಯಿಯವರು ಚೆನ್ನಮ್ಮಗೆ ಸಮರ ಕಲೆ ಕಲಿಸಿದ್ದರು. ಶೌರ್ಯ ಸಾಹಸ ಕಲಿಸಿದ್ದರು. ಸ್ಥಿತಪ್ರಜ್ಞತ್ವವು, ಚರಿತ್ರೆ ಮತ್ತು ಸಮಕಾಲೀನ ಪ್ರಜ್ಞೆಗಳಿಗೆ ಕಿತ್ತೂರು ಇತಿಹಾಸ ಮೈಲಿಗಲ್ಲು. ಅಭಿಜಾತ ಕನ್ನಡದ ಮೂಲ ಸಾಮಗ್ರಿ ಜನಪದರ ಲಾವಣಿ, ಹಂತಿ ಪದ, ಗೀಗೀ ಪದ, ಅಲಾವಿ ಹಾಡಿನೊಳಗೆ ಚೆನ್ನಮ್ಮ ಕುರಿತಾಗಿ ವರ್ಣನೆ ಕಾಣಬಹುದಾಗಿದೆ. ಚೆನ್ನಮ್ಮನ ವ್ಯಕ್ತಿತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಚೆನ್ನಮ್ಮಗೆ ಇತ್ತು. ಗಂಭೀರ ನಡೆ, ವಿವೇಕಯುತ ನಿಲುವು ಹೊಂದಿದ್ದ ಚೆನ್ನಮ್ಮ ತ್ಯಾಗ ಜೀವಿಯಾಗಿದ್ದರು. ಸಂಸ್ಥಾನದ ಗೌರವವನ್ನು ಎತ್ತಿ ಹಿಡಿದು, ಚೆನ್ನಮ್ಮ ಸ್ವಾತಂತ್ರ್ಯ ಯಜ್ಞದ ಮಹಾಚಿಲುಮೆ ಎಂದು ಡಾ.ಮೈತ್ರೇಯಿಣಿ ಹೇಳಿದರು.

ಜಿಪಂ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ, ಮುಖಂಡರಾದ ಬಿ.ಎಂ.ಪಾಟೀಲ, ಶ್ರೀಶೈಲ ಬುಕ್ಕಣಿ, ಸಿದ್ದು ಅವಟಿ, ದಾನೇಶ ಅವಟಿ, ವಿಜಯ ಹಿರೋಳಿ, ನಿಂಗಪ್ಪ ಸಂಗಾಪೂರ, ನಿವೃತ್ತ ಶಿಕ್ಷಕ ಎಚ್.ಮಮದಾಪುರ ಮತ್ತಿತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇಸ್ಥಾನದಿಂದ ಹಮ್ಮಿಕೊಂಡ ಚೆನ್ನಮ್ಮಾಜಿ ಬೃಹತ್ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ವಿವಿಧ ವೃತ್ತಗಳಲ್ಲಿ ಸಂಚರಿಸಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು. ವಿರೇಶ ವಾಲಿ ನೇತೃತ್ವದ ಕಲಾ ತಂಡ ಸಂಗೀತದ ರಸದೌತಣ ಬಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net