

ಉಡುಪಿ : ಆಧುನಿಕ ಕರ್ನಾಟಕ ನಿಮಾರ್ಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ನಡೆದ ಶ್ರೀ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದು, ಚೆನ್ನಮ್ಮರ ಹೋರಾಟದ ಮನೋಭಾವವು ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದರೊಂದಿಗೆ ಚೆನ್ನಮ್ಮರ ಶೌರ್ಯ ಸಾಹಸ, ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
ಹಿರಿಯಡ್ಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಉಪನ್ಯಾಸ ನೀಡಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನು ಮನ ವನ್ನು ಅರ್ಪಿಸಿದವರು ಕಿತ್ತೂರು ರಾಣಿ ಚೆನ್ನಮ್ಮ. ಚಿಕ್ಕಂದಿನಿಂದಲೇ ಶಸ್ತ್ರಾಭ್ಯಾಸ, ರಾಮಾಯಣ ಮಹಾಭಾರತ ಪುರಾಣಗಳ ಅಧ್ಯಯನ ಹಾಗೂ ಧಾರ್ಮಿಕ ವಿಚಾರಗಳು ಆಕೆಯನ್ನು ಕೆಚ್ಚೆದೆಯ ವೀರವನಿತೆಯನ್ನಾಗಿ ಮಾಡಿತು ಎಂದರು.
ಜಿಪಂ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ನರಸಿಂಹ ಮೂರ್ತಿ, ಜಂಗಮ ಮಠದ ಗಿರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಶಶಿಧರ್ ನಿರೂಪಿಸಿ, ಜಂಗಮ ಮಠದ ಡಾ. ನಿರಂಜನ ವಂದಿಸಿದರು.