

ಬೇಲೂರು: ದಕ್ಷಿಣ ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಸಾಧನೆ ಮಹಿಳಾ ಸಮುದಾಯಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ತಾಲೂಕು ಆಡಳಿತದಿಂದ ಕಿತ್ತೂರು ರಾಣಿ ಚನ್ನಮ್ಮ ಜನ್ಮ ದಿನಾಚರಣೆ ಅಂಗವಾಗಿ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಶೌರ್ಯ ಹಾಗೂ ವೀರಾವೇಶದ ಹೋರಾಟವನ್ನು ಮೈಗೂಡಿಸಿಕೊಂಡು ರಾಜ್ಯಭಾರ ಮಾಡಿದ ಕೆಚ್ಚೆದೆಯ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ. ಅವರು ರಾಜ್ಯ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ರಣರಂಗದಲ್ಲಿ ಕತ್ತಿ ಹಿಡಿದು ಹೋರಾಟ ಮಾಡಿದ ದಕ್ಷ ಆಡಳಿತಗಾರ್ತಿಯಾಗಿದ್ದರು. ಅವರ ಆಡಳಿತ ಇತರರಿಗೆ ಆದರ್ಶವಾಗಿತ್ತು. ಚನ್ನಮ್ಮರ ತತ್ವ ಸಿದ್ಧಾತಗಳು ಮತ್ತು ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಮಾ.ನಾ.ಮಂಜೇಗೌಡ ಮಾತನಾಡಿ, ಸುಸಜ್ಜಿತ ಕೋಟೆಯನ್ನು ಹೊಂದಿ ಪತಿಯನ್ನು ಕಳೆದುಕೊಂಡರೂ ಎದೆಗುಂದದೆ ದಕ್ಷತೆ, ಧೈರ್ಯ, ಪ್ರಾಮಾಣಿಕತೆಯಿಂದ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿ ಜಯಗಳಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅವರ ಸಾಧನೆ ಅಪಾರ. ಜತೆಗೆ ದೇಶದಲ್ಲಿ ಪ್ರಸಕ್ತ ಸನ್ನಿವೇಶದ ಸಂದರ್ಭ ಮಹಿಳೆಯರು ತಾವು ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ದಬ್ಬಾಳಿಕೆ, ದೌರ್ಜನ್ಯ ನಡೆದರೂ ಅದನ್ನು ಮೆಟ್ಟಿ ನಿಂತು ಸಾಧನೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಸರ್ಕಾರಗಳು ಸ್ತ್ರೀ, ಪುರುಷರು ಸಮಾನರು ಎಂಬ ಕಾನೂನು ಜಾರಿಗೆ ತಂದು ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದು, ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹರೀಶ್, ಪಿಎಸ್‌ಐ ಚಂದ್ರು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ರೈತ ಸಂಘದ ಕಾರ್ಯದರ್ಶಿ ಬಸವರಾಜು ಇತರರು ಇದದರು.