ಕಿತ್ತೂರು ಕರ್ನಾಟಕ ಮಕ್ಕಳ ಸಮಾವೇಶ ಜ. 4ರಿಂದ

20 Dwd 5 Shreeshail Karikatti
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಘಟಕದಿಂದ ತಾಲೂಕಿನ ದಡ್ಡಿ ಕಮಲಾಪೂರದಲ್ಲಿ ಕಿತ್ತೂರು ಕರ್ನಾಟಕ ಮಕ್ಕಳ ಸಮಾವೇಶವನ್ನು 2025ರ ಜ. 6ರಿಂದ 10ರವರೆಗೆ ಆಯೋಜಿಸಲಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಶ್ರೀಶೈಲ ಕರಿಕಟ್ಟಿ ಹೇಳಿದರು.

ನಗರದ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಬೆಳಗಾವಿ ವಿಭಾಗದ 8 ಕಾರವಾರ, ಶಿರಸಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ ಶೈಕ್ಷಣಿಕ ಜಿಲ್ಲೆಗಳಿಂದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ನ 800 ಮಕ್ಕಳು ಭಾಗವಹಿಸುವರು. ಕಾಲೇಜುಗಳ 120 ರೋವರ್ಸ್ ಮತ್ತು ರೇಂಜರ್ಸ್ ಮಕ್ಕಳು, 80 ಜನ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಹಾಗೂ ಕಾರ್ಯಕ್ರಮದ ಆಯೋಜನೆ ಮತ್ತು ಉಸ್ತುವಾರಿಗಾಗಿ 200 ಸಿಬ್ಬಂದಿ ಭಾಗವಹಿಸುವರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಅಧ್ಯಕ್ಷತೆ ವಹಿಸುವರು. ಮಕ್ಕಳಿಂದ ಸಾಹಸಮಯ ಚಟುವಟಿಕೆಗಳಾದ ಹಗ್ಗ ಏರುವುದು, ಸಮತೋಲನ ನಡಿಗೆ, ಟೈರ್ ಪಾಸಿಂಗ್, ವಾಚಿಂಗ್ ಟವರ್, ಇತರ ಚಟುವಟಿಕೆಗಳು ನಡೆಯಲಿವೆ. ಜತೆಗೆ ಶೈಕ್ಷಣಿಕ ಉಪನ್ಯಾಸ, ರಸಪ್ರಶ್ನೆ ಕಾರ್ಯಕ್ರಮ, ಯೋಗ, ಸ್ವಚ್ಛತಾ ಕಾರ್ಯ, ಶಿಬಿರ ವಾಸದ ಕಲ್ಪನೆ, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಶಿಕ್ಷಕರು ನಿರ್ಮಿಸಿದ ಕಿರುಚಿತ್ರಗಳ ಪ್ರದರ್ಶನ, ಜಾನಪದ ಸಂಗೀತ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಉಪಾಧ್ಯಕ್ಷ ವಿ.ವಿ. ಕಟ್ಟಿ, ಪದಾಽಕಾರಿಗಳಾದ ಬಸವರಾಜ ಕಡಕೋಳ, ಎಸ್.ಐ. ನೇಕಾರ, ಎಸ್.ವಿ. ಮೊರಬ, ಮಂಜುನಾಥ ಅಡಿವೇರ, ಸಿ.ಸಿ. ಅಳಗೋಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net