

ಬಸವರಾಜ ಕಲಾದಗಿ ಬೈಲಹೊಂಗಲ
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ರಸ್ತೆಯಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ದೀಪಗಳು ಬೆಳಗದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಕತ್ತಲು ಕವಿದಿದೆ. ಸಮಾಧಿ ಸ್ಥಳದಲ್ಲೂ ಸಮಸ್ಯೆ ಭಿನ್ನವಾಗಿಲ್ಲ. ಹೀಗಾಗಿ, ಸ್ವಾತಂತ್ರ್ಯ ಸೇನಾನಿ ಚನ್ನಮ್ಮನ ಸಮಾಧಿ ಕತ್ತಲು ಭಾಗ್ಯ ಎದುರಿಸುತ್ತಿದೆ.
ಅಂದು ದೇಶಕ್ಕಾಗಿ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮಾಜಿ ಕತ್ತಲೆಯ ಸೆರೆಮನೆ ವಾಸ ಅನುಭವಿಸಿದ್ದರು. ಆದರೆ, ಇಂದು ಸ್ಥಳಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ರ್ನಿಲ್ಯದಿಂದ ವೀರರಾಣಿ ಚನ್ನಮ್ಮನ ಸಮಾಧಿಗೂ ಕತ್ತಲು ಕವಿದಿರುವುದೂ ಸ್ಥಳಿಯರು ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ. ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆಯಿಂದ ನಿತ್ಯ ನೂರಾರು ಪ್ರವಾಸಿಗರು ಚನ್ನಮ್ಮಾಜಿ ಸಮಾ-ಧಿ ಸ್ಥಳ ಕಣ್ತುಂಬಿಕೊಳ್ಳಲು ಬರುತ್ತಾರೆ. ಸಂಜೆಯಾಗುತ್ತಿದ್ದಂತೆ ಚನ್ನಮ್ಮಾಜಿ ಸಮಾಧಿ ಸೇರಿ ಸುಮಾರು 400 ಮೀ. ಸಮಾಧಿಯ ದ್ವಿಮುಖ ರಸ್ತೆ ವಿದ್ಯುತ್ ದೀಪ ಬೆಳಗದೆ ಕತ್ತಲೆ ಆವರಿಸುತ್ತದೆ.
ಅಪಾಯ ಆಹ್ವಾನ ನೀಡುತ್ತಿರುವ ವಿದ್ಯುತ್ ತಂತಿ: ಕಳೆದ ಎರಡು ವರ್ಷಗಳ ಹಿಂದೆ ಅಳವಡಿಸಿದ ಬಣ್ಣ ಬಣ್ಣದ ವಿದ್ಯುತ್ ದೀಪಗಳೂ ನಿರ್ವಹಣೆ ಇಲ್ಲದೆ ಮಂಕಾಗಿವೆ. ಅನೇಕ ಕಂಬಗಳು ನೆಲಕಚ್ಚಿವೆ. ವಿದ್ಯುತ್ ಕಂಬಗಳ ಕೆಳ ಭಾಗದಲ್ಲಿ ವಿದ್ಯುತ್ ತಂತಿ ನೇತಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸಿಮೆಂಟ್ ರಸ್ತೆಯೂ ಎಲ್ಲೆಂದರಲ್ಲಿ ಕಿತ್ತು ಹೋಗಿದ್ದು, ದ್ವಾರ ಬಾಗಿಲದ ಟೈಲ್ಸ್ ಕಳಚಿವೆ. ಇಲ್ಲಿ ಸಂಗೊಳ್ಳಿ ರಾಕ್ ಗಾರ್ಡನ್ ಮಾದರಿಯಲ್ಲಿ 3&4 ವರ್ಷಗಳಿಂದ ನಡೆದಿರುವ ಕಾಮಗಾರಿಯೂ ಮಂದಗತಿಯಲ್ಲಿ ಸಾಗಿದೆ.
ಮೂಗು ಮುಚ್ಚಿಕೊಂಡು ಪ್ರವೇಶ: ಚನ್ನಮ್ಮಾಜಿ ಸಮಾಧಿ ರಸ್ತೆಯ ಬಲ ಬದಿಯಲ್ಲಿ ಹಳೇ ಕಾಲದ ಬಾವಿಯಲ್ಲಿ ಸಾರ್ವಜನಿಕರು ಕಸ&ಕಡ್ಡಿ, ಹೋಟೆಲ್ ತಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ಎಸೆಯುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆ. ದ್ವಿಮುಖ ರಸ್ತೆ ಮಧ್ಯೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಡಿವೈಡರ್ನಲ್ಲಿ ಹೂಳು ತುಂಬಿದ್ದು, ನಿರುಪಯುಕ್ತವಾಗಿದೆ. ರಸ್ತೆ ಬದಿಯಲ್ಲಿ ಖಾಸಗಿ ವಾಹನಗಳ ದರ್ಬಾರ ಹೆಚ್ಚಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನ ಹರಿಸಿ ವೀರರಾಣಿ ಚನ್ನಮ್ಮನ ಸಮಾಧಿ ರಸ್ತೆ ಹಾಗೂ ಸಮಾಧಿಗೆ ವಿದ್ಯುತ್ ಭಾಗ್ಯ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
"ವೀರರಾಣಿ ಚನ್ನಮ್ಮಾಜಿ ಸಮಾ-ಧಿ ಸ್ಥಳದ ವಿದ್ಯುತ್ ದೀಪಗಳ ದುರಸ್ತಿ, ಸ್ವಚ್ಛತೆ ಹಾಗೂ ಕಳಪೆ ಕಾಮಗಾರಿ ಕುರಿತು ಪುರಸಭೆ ಮುಖ್ಯಾ-ಕಾರಿ ಹಾಗೂ ಉಪವಿಭಾಗಾ-ಧಿಕಾರಿಗಳಿಗೆ ತಿಳಿಸಲಾಗಿದೆ. ಕೂಡಲೇ ಸಮಸ್ಯೆ ಪರಿಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಹೋರಾಟ ಕೈಗೊಳ್ಳಲಾಗುವುದು."
> ಗುರು ಮೆಟಗುಡ್ಡ ಪುರಸಭೆ ಸದಸ್ಯ
"ಮಳೆಯಿಂದ ವಿದ್ಯುತ್ ದೀಪಗಳ ಕೇಬಲ್ ಬ್ಲಾಸ್ಟ್ ಆಗಿದ್ದು, ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸ್ವಚ್ಛತೆ ಮತ್ತು ಕಳಪೆ ಕಾಮಗಾರಿ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು."
> ವೀರೇಶ ಹಸಬಿ ಮುಖ್ಯಾ-ಧಿಕಾರಿ ಪುರಸಭೆ, ಬೈಲಹೊಂಗಲ