

ಮಂಡ್ಯ: ಹಿಂದಿನ ಕಾಲದಲ್ಲಿ ಭಾರತ ಪುರುಷ ಪ್ರಧಾನವಾದ ದೇಶವಾಗಿದ್ದರೂ, ಕಿತ್ತೂರು ರಾಣಿ ಚೆನ್ನಮ್ಮ ಕತ್ತಿಯಿಡಿದು ಯುದ್ಧದಲ್ಲಿ ಹೋರಾಟ ಮಾಡಿದರು. ಪ್ರತಿ ಮನೆಯ ಹೆಣ್ಣು ಮಕ್ಕಳು ಕಿತ್ತೂರು ರಾಣಿ ಚೆನ್ನಮ್ಮನಂತೆ ಧೈರ್ಯಶಾಲಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಹೆಚ್ಚು ಧೈರ್ಯಶಾಲಿಯಾಗಿದ್ದರು. ಯಾವುದಕ್ಕೂ ಹೆದರದೆ ಮುನ್ನುಗ್ಗಿ ಹೋರಾಡುತ್ತಿದ್ದರು. ನಮಗೆ ಸ್ವಾತಂತ್ರ್ಯ ಸಿಗುವುದಕ್ಕೆ ಕಾರಣರಾಗಿದ್ದವರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸಹ ಒಬ್ಬರು ಎಂದು ಹೇಳಿದರು.
ಪ್ರತಿ ಮನೆಯಲ್ಲೂ ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ ಸಾಧನೆಯ ಬಗ್ಗೆ ಮಕ್ಕಳಿಗೆ ತಿಳಿಸಿ ಅರಿವು ಮೂಡಿಸಬೇಕು. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬ ಛಲದ ಬಗ್ಗೆ ಅವರಿಗೆ ತಿಳಿ ಹೇಳಿ ಮನೆಯ ಹೆಣ್ಣುಮಕ್ಕಳನ್ನು ಧೈರ್ಯಶಾಲಿ ಹೆಣ್ಣುಮಕ್ಕಳನ್ನಾಗಿ ಮಾಡಿ. ಚೆನ್ನಮ್ಮ ಅವರು ಅತೀ ಚಿಕ್ಕ ವಯಸ್ಸಿನಲ್ಲೇ ರಾಜಮನೆತನ ಹಾಗೂ ಯುದ್ಧದ ಬಗ್ಗೆ ತಿಳಿದುಕೊಂಡಿದ್ದರು. ಚೆನ್ನಮ್ಮ ತಂದೆಯ ಸಹಕಾರದಿಂದ ಬಲಿಷ್ಠ ಹಾಗೂ ಧೈರ್ಯಶಾಲಿ ಹೆಣ್ಣು ಮಗಳಾದಳು ಎಂದರು.
ಆದಷ್ಟು ಸ್ವಾತಂತ್ರ್ಯ ಹೋರಾಟಗಾರರು, ಸಾಧನೆ ಗೈದವರ ಬಗ್ಗೆ ಮಕ್ಕಳಿಗೆ ತಿಳಿಸಿ. ನಿಜವಾದ ಹೀರೋಗಳು ಅಂದರೆ ಸ್ವಾತಂತ್ರ್ಯಕ್ಕಾಗಿ ಮಡಿದವರು, ಸಾಧನೆ ಮಾಡಿರುವವರು ಎಂದು ಅವರಿಗೆ ಹೇಳಿ. ಅವರ ಚರಿತ್ರೆ, ಸಾಧನೆಗಳ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿ ಮಾಡಿ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಅತ್ಯಂತ ಧೀರ ಮಹಿಳೆ. ಅವರ ಹೆಸರು ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ. ಈಗೀನ ಪೀಳಿಗೆಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಕೂಡ ಇವರ ಹೆಸರು ಮತ್ತು ಸಾಧನೆ ಅಜರಾಮರವಾಗಿರುತ್ತದೆ. ಎಷ್ಟೋ ಜನ ಬದುಕಿದ್ದರೂ ಕೂಡ ಸತ್ತವರಂತೆ ಇರುತ್ತಾರೆ. ಸತ್ತವರು ಬದುಕಿರಬೇಕು ಎಂದರೆ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳುವಂತಹ ಸಾಧನೆ ಮಾಡಿ ಹೆಸರು ಇತಿಹಾಸದ ಪುಟದಲ್ಲಿ ಇರುವಂತೆ ಮಾಡಿಕೊಳ್ಳಿ ಎಂದು ಹೇಳಿದರು.
ಎಂಐಟಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ.ಜಿ.ಉಷಾರಾಣಿ ಉಪನ್ಯಾಸ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಈ.ತಿಮ್ಮಯ್ಯ, ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ. ನಂದೀಶ್ ಇತರರಿದ್ದರು.