ಬಾನಂಗಳದಲ್ಲಿ ಹಾರಾಡಿದ ಗಾಳಿಪಟ

Devanahalli-20-3
Published on

 ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ

ಪ್ರತೀ ವರ್ಷದಂತೆ ಆಷಾಢ ಮಾಸದ ಪ್ರಯುಕ್ತ ಪ್ರಸಕ್ತ ವರ್ಷ ದೇವನಹಳ್ಳಿಯಲ್ಲಿ ಅಯೋಜಿಸಿದ್ದ ಗಾಳಿಪಟ ಹಾರಾಟ ಉತ್ಸವ ಎಲ್ಲರ ಮೆಚ್ಚುಗೆಗಳಿಸಿತು. ಆಗಸದಲ್ಲಿ ಎತ್ತತ್ತರಕ್ಕೆ ಹಾರಾಟ ನಡೆಸಿ ನೋಡುಗರ ಕಣ್ಣುಗಳಿಗೆ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಮೂಲಕ ಸ್ಪರ್ಧಿಗಳು ಉತ್ಸವಕ್ಕೆ ಮೆರವು ನೀಡಿದರು.

ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗಾಳಿಪಟ ಉತ್ಸವಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಾಳಿಪಟ್ಟ ಉತ್ಸವ ಪ್ರಯುಕ್ತ ಗಾಳಿಪಟ ಹಾರಿಡುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ದೊಡ್ಡಬಳ್ಳಾಪುರ, ವಿಜಯಪುರ ಹಾಗೂ ದೇವನಹಳ್ಳಿ ತಾಲೂಕಿನಿಂದ ್ಟ 65 ಸ್ಪರ್ಧಿಗಳು ಭಾಗವಹಿಸಿ ತಾವು ತಯಾರಿಸಿದ್ದ ವಿವಿಧ ವರ್ಣಗಳ ಗಾಳಿಪಟಗಳನ್ನು ಹಾರಿಸುವ ಮೂಲಕ ಉತ್ಸವಕ್ಕೆ ರಂಗು ತುಂಬಿದರು. ಗಂಡಬೇರುಂಡ, ಆಂಜನೇಯ, ತಾಯಿಮಗು, ಭೂತ, ಬುದ್ದ, ಎಲೆ, ಮಹಾಕಾಳಿ, ಹೃದಯ, ಕರ್ನಾಟಕ ಭೂಪಟ, ಭಾರತ ಭೂಪಟ ಸೇರಿ ಹಲವು ಬಗೆಯ ಗಾಳಿಪಟಗಳು ಆಗಸದಲ್ಲಿ ಹಾರಾಟ ನಡೆಸಿ ನೋಡುಗರ ಮನತಣಿಸಿತು. ಸಾವಿರಾರು ಪ್ರೇಕ್ಷಕರು ಪಾಲ್ಗೊಂಡು ಸ್ಪರ್ಧಿಗಳಿಗೆ ಬೆನ್ನುತಟ್ಟುವ ಮೂಲಕ ಹುರುತುಂಬಿಸಿದರು.

ದೊಡ್ಡಬಳ್ಳಾಪುರಕ್ಕೆ ಮೂರು ಪ್ರಥಮ: ವಿವಿಧ ಸ್ಪರ್ಧಿಗಳು ಹಾರಿಸಿದ ಗಾಳಿಪಟಗಳಲ್ಲಿ ದೊಡ್ಡಬಳ್ಳಾಪುರದ ಬುದ್ದ, ಎಲೆ ಮತ್ತು ಮಹಾಕಾಳಿ ಗಾಳಿಪಟಗಳು ಅತ್ಯುತ್ತಮ ಹಾರಾಟ ನಡೆಸಿ ಪ್ರಥಮ ಮೂರು ನಗದು ಬಹುಮಾನ ಪಾರಿತೋಷಕ ನೆನಪಿನ ಕಾಣಿಕೆ ತಮ್ಮದಾಗಿಸಿಕೊಂಡವು. ಉಳಿದಂತೆ ಎಲ್ಲ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಗ್ರಾಮೀಣ ಸೊಗಡು:

ಆಷಾಢ ಮಾಸ ಬಂದಿತೆಂದರೆ ಗ್ರಾಮೀಣ ಸೊಗಡಿನ ಗಾಳಿಪಟಗಳ ಸ್ಪರ್ಧೆ ಆಯೋಜಿಸಿ ಆಗಸದಲ್ಲಿ ಬಣ್ಣಬಣ್ಣದ ಪಟಗಳ ಮನಮೋಕ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ ಮಾಡಿಕೊಡಲಾಗುತ್ತಿದೆ ಇದು ನಮ್ಮ ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಕಾಂಗ್ರೆಸ್ ಮುಖಂಡ ದ್ಯಾವರಹಳ್ಳಿ ಚಂದ್ರು ಹೇಳಿದರು. ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮೊಬೈಲ್‌ಗೀಳು, ಆನ್‌ಲೈನ್ ಆಟಗಳಿಗೆ ಮರುಳಾಗಿರುವ ಯುಜನತೆ ಗ್ರಾಮೀಣ ಆಟಗಳನ್ನು ಮರೆಯುತ್ತಿದ್ದಾರೆ. ಜೆಸಿಐ ಗಾಳಿಪಟ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಅಳಗುಳಿ ಆಟ, ಕುಂಟೆಬಿಲ್ಲೆ ಸೇರಿ ಹಲವು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಮನುಷ್ಯ ಎಷ್ಟೇ ಎತ್ತರಕ್ಕೆ ಏರಿದರೂ ಭೂಮಿಗೆ ಇಳಿಯಲೇಬೇಕು. ಮಣ್ಣಲ್ಲಿ ಮಣ್ಣಾಗಲೇಬೇಕು ಎಂಬ ಮಾರ್ಮಿಕ ಜೀವನ ಸತ್ಯದ ಸಂಕೇತವನ್ನು ಗಾಳಿಪಟ ಸೂಚಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net