ಜಿಕೆವಿಕೆಯಲ್ಲಿ ಜು.27ರಂದು ಗಾಳಿಪಟ ಉತ್ಸವ ಮತ್ತು ಸ್ಪರ್ಧೆ

kite sport
Published on

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜಿಕೆವಿಕೆಯ ಕೃಷಿಮೇಳ ಮೈದಾನದಲ್ಲಿ 34ನೇ ರಾಜ್ಯಮಟ್ಟದ ಗಾಳಿಪಟ ಉತ್ಸವ ಮತ್ತು ಸ್ಪರ್ಧೆಗೆ ಶನಿವಾರ (ಜು.27) ಬೆಳಗ್ಗೆ 10 ಗಂಟೆಗೆ ಚಾಲನೆ ಸಿಗಲಿದೆ.

ಮೊದಲಿಗೆ 14 ವರ್ಷದೊಳಗಿನ ಹಾಗೂ 15-22 ವರ್ಷದೊಳಗಿನ ಯುವಕ, ಯುವತಿಯರಿಗೆ ಪ್ರತ್ಯೇಕವಾಗಿ ಗಾಳಿಪಟ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಉಚಿತ ಪ್ರವೇಶವಿದ್ದು, ಸ್ಥಳದಲ್ಲೇ ಬೆಳಿಗ್ಗೆ 9 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ವಿಜೇತರಿಗೆ ಪ್ರಥಮ, ದ್ವೀತಿಯ, ತೃತೀಯ ಹಾಗೂ 2 ಸಮಾಧಾನಕರ ನಗದು ಬಹುಮಾನಗಳಿರುತ್ತದೆ. ಅತ್ಯುತ್ತಮ ಸಂದೇಶ ಸಾರುವ ಹಾಗೂ ಸುಂದರ ಗಾಳಿಪಟಕ್ಕೆ ನಾಡೋಜ ಎಚ್.ಎಲ್. ನಾಗೇಗೌಡ ಹೆಸರಿನ ಪಾರಿತೋಷಕ ನೀಡಲಾಗುತ್ತದೆ. ಸಾರ್ವಜನಿಕರ ವೀಕ್ಷಣೆಗೆ ಉಚಿತ ಪ್ರವೇಶವಿರುತ್ತದೆ.

ಸಾಂಸ್ಕೃತಿಕ ಕ್ರೀಡೆ ಪುನರುಜ್ಜೀವನಕ್ಕೆ ಯತ್ನ:

ಗಾಳಿಪಟ ಹಾರಿಸುವಿಕೆ ಗ್ರಾಮೀಣ ಭಾಗದ ಅಪ್ಪಟ ಕ್ರೀಡೆ. ನಾಡಿನ ಸಾಂಸ್ಕೃತಿಕ ಪ್ರತೀಕವಾಗಿಯೂ ಈ ಕ್ರೀಡೆ ಗುರುತಿಸಿಕೊಂಡಿದೆ. ಆದರೆ, ಇತ್ತೀಚಿಗೆ ನಾನಾ ಕಾರಣದಿಂದ ಗಾಳಿಪಟ ಹಾರಿಸುವ ಪದ್ಧತಿ ಹಿಂದೆ ಸರಿಯುತ್ತಿದೆ. ಜಾನಪದ ಹಿನ್ನೆಲೆಯಿಂದ ಬಂದಿರುವ ಈ ಕ್ರೀಡೆಯನ್ನು ಉಳಿಸಿ ಬೆಳೆಸಲು ಪುನರುಜ್ಜೀವನಗೊಳಿಸಲು ಸಂಸ್ಥೆ ಮುಂದಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಗಾಳಿಪಟ ಸ್ಪರ್ಧೆಗೆ ರಾಜ್ಯದ ವಿವಿಧೆಡೆಗಳಿಂದ 200ಕ್ಕಿಂತ ಹೆಚ್ಚು ಸ್ಪರ್ಧಿಗಳು ಆಗಮಿಸಲಿದ್ದಾರೆ. ಈಗಾಗಲೇ 20 ತಂಡಗಳು ನೋಂದಾಯಿಸಿಕೊಂಡಿದ್ದು, ಒಂದು ತಂಡದಲ್ಲಿ ಗಾಳಿಪಟ ಹಾರಿಸುವವರು ಮತ್ತು ಸಹಾಯಕರಿಗೆ ಅವಕಾಶ ಇರುತ್ತದೆ. ಸ್ಪರ್ಧೆ ಬಳಿಕ ಮಧ್ಯಾಹ್ನ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.

ಸ್ಪರ್ಧೆಯ ಬಳಿಕ ನಾಡಿನ ಹೆಸರಾಂತ ಗಾಳಿಪಟ ಕಲಾವಿದರಾದ ವಿ.ಕೆ.ರಾವ್, ಪುನೀತ್ ಗೋಳೂರು ಬೃಹತ್ ಗಾಳಿಪಟ ಹಾರಿಸಲಿದ್ದಾರೆ. ಜತೆಗೆ ದೊಡ್ಡಬಳ್ಳಾಪುರದ ಗಾಳಿಪಟ ಸಂಘದ ಕಲಾವಿದರು, ಮೈಸೂರಿನಿಂದ ಪುಷ್ಷ, ಪೂರ್ಣಿಮಾ, ಮಂಡ್ಯ ಹಾಗೂ ಬಳ್ಳಾರಿಯಿಂದ ಇನ್ನಿತರರು ವೈವಿಧ್ಯಮಯ ಬಣ್ಣ ಬಣ್ಣದ ಗಾಳಿಪಟ ಹಾರಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಕೃಷಿ ವಿವಿಯ ಅಧಿಕಾರಿಗಳಾದ ಡಾ. ವಿ.ಎಲ್.ಮಧುಪ್ರಸಾದ್, ಡಾ. ಕೆ.ಸಿ.ನಾರಾಯಣಸ್ವಾಮಿ ಇದ್ದರು.

ಕೃಷಿ ಸಚಿವರಿಂದ ಉದ್ಘಾಟನೆ:

ಗಾಳಿಪಟ ಉತ್ಸವ ಮತ್ತು ಸ್ಪರ್ಧೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ.ಚಿ.ಬೋರಲಿಂಗಯ್ಯ ವಹಿಸಲಿದ್ದು, ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಮತ್ತು ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಉಪಸ್ಥಿತರಿರಲಿದ್ದಾರೆ.

ಸ್ಪರ್ಧೆಗೆ ಮಾಂಜ ಬಳಕೆ ನಿಷೇಧ:

ಗಾಳಿಪಟ ಉತ್ಸವದಲ್ಲಿ ಗ್ರಾಮೀಣ ಮೂಲದ ಬೋರಂಟಿ, ಗುಂಡುಚಕ್ರದಂತಹ ಪಟಗಳು, ನಗರ ಮೂಲದ ಸಂಯೋಜನೆಯ ಸರಮಾಲೆ ಪಟ, ಎರಡು ದಾರಗಳ ಪಟಗಳಂತಹ ಪಟಗಳು ಪಾಲ್ಗೊಳ್ಳಲಿವೆ. ಪಟಗಳನ್ನು ಹಾರಿಸುವವರು ಮಾಂಜ ದಾರಗಳನ್ನು ಬಳಸುವಂತಿಲ್ಲ. ಸ್ಪರ್ಧಿಗಳ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್‌ಅನ್ನು ನೋಂದಣಿ ವೇಳೆ ನೀಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net