

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾಗಿ ಪ್ರತೀ ವರ್ಷ ನಿಗದಿತ ದಿನಾಂಕದಂದು ಮಂಗಳೂರಿನಲ್ಲಿ ಗಾಳಿಪಟ ಉತ್ಸವ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಟೀಮ್ ಮಂಗಳೂರು ಇದರ ವತಿಯಿಂದ ನಗರದ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಶನಿವಾರ ಸಾಯಂಕಾಲ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ಗಾಳಿಪಟ ಉತ್ಸವ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಟೂರಿಸಂ ಕ್ಯಾಲೆಂಡರ್ ರೂಪಿಸಿಕೊಂಡು ಗಾಳಿಪಟ ಉತ್ಸವವನ್ನು ಶಾಶ್ವತವಾಗಿ ಅಳವಡಿಸಿಕೊಂಡು ಪ್ರೋತ್ಸಾಹ ನೀಡಲು ಕ್ರಮ ವಹಿಸಲಾಗುವುದು. ಟೀಮ್ ಮಂಗಳೂರು ಕಡಿಮೆ ಅವಧಿಯಲ್ಲಿ ಉತ್ಸವವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದೆ ಎಂದು ಸಚಿವರು ಶ್ಲಾಘಿಸಿದರು.
ಇದೇ ಸಂದರ್ಭ ಸಂವಿಧಾನ ಜಾಗೃತಿ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ‘ವಿಶ್ವದಲ್ಲಿ ಭಾರತ ದೇಶದ ಬಹುಮುಖಿ ಸಂಸ್ಕೃತಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುವಲ್ಲಿ ಸಂವಿಧಾನದ ಪಾತ್ರ ಮಹತ್ತರವಾಗಿದೆ. ಆದ್ದರಿಂದ ಸಂವಿಧಾನ ಬಗ್ಗೆ ಎಲ್ಲರೂ ತಿಳಿದುಕೊಂಡು ದೇಶದ ಐಕ್ಯತೆ ಕಾಪಾಡಬೇಕು ಎಂದರು.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಾರ್ವಜನಿಕರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪಾಲಿಕೆ ಆಯುಕ್ತ ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ , ಟೀಮ್ ಮಂಗಳೂರಿನ ಸ್ಥಾಪಕ ಬಿ. ಸರ್ವೇಶ್ ರಾವ್, ದಿನೇಶ್ ಹೊಳ್ಳ, ಸುಭಾಷ್ ಪೈ, ಪ್ರಾಣ್ ಹೆಗ್ಡೆ, ಪ್ರಶಾಂತ್ ಉಪಾಧ್ಯಾಯ ಉಪಸ್ಥಿತರಿದ್ದರು. ಗೌರವ್ ಹೆಗ್ಡೆ ಸ್ವಾಗತಿಸಿದರು. ಸೈದುದ್ದೀನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.