

ಜಿ.ನಾಗರಾಜ್ ಬೂದಿಕೋಟೆ
ಬಂಗಾರಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ಅಂಗನವಾಡಿ ಕೇಂದ್ರವನ್ನು ಯೋಗ್ಯವಲ್ಲದ ಸಣ್ಣ ಅಡುಗೆ ಕೋಣೆಯಲ್ಲಿ ನಡೆಸಲಾಗುತ್ತಿದ್ದು, ಅದೂ ಸಹ ಶಿಥಿಲಗೊಂಡಿರುವ ಕಾರಣ ಮಕ್ಕಳಿಗೆ ಪ್ರಾಥಮಿಕ ಪೂರ್ವ ಶಿಕ್ಷಣ ನೀಡಲು ಸಮಸ್ಯೆ ಎದುರಾಗಿದೆ.
ಸರ್ಕಾರ ಲಕ್ಷಾಂತರ ರೂ. ಖರ್ಚು ಮಾಡಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಆಧುನಿಕತೆಗೆ ತಕ್ಕಂತೆ ಅಂಗನವಾಡಿ ಕೇಂದ್ರಗಳನ್ನು ನಿಮಾರ್ಣ ಮಾಡುತ್ತಿದೆ. ಇಂತಹ ದಿನಗಳಲ್ಲಿ ಬಂಗಾರಪೇಟೆ ತಾಲೂಕು ಕೇಂದ್ರಕ್ಕೆ ಕೇವಲ 3&4 ಕಿ.ಮೀ ದೂರದಲ್ಲಿರುವ ಹೊಸಕೋಟೆಯ ಅಂಗನವಾಡಿಗೆ ಸ್ವಂತ ಕಟ್ಟಡವೇ ಇಲ್ಲ. ಇದರಿಂದ ಗ್ರಾಮದ ಸರ್ಕಾರಿ ಶಾಲೆಯ ಅಡುಗೆ ಕೋಣೆಯನ್ನೇ ಕೇಂದ್ರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದೂ ಸಹ ಕೇವಲ ಸಣ್ಣ ಕೊಠಡಿಯಾಗಿದ್ದು, ಮಕ್ಕಳಿಗೆ ಪಾಠ ಪ್ರವಚನ ಮಾಡುವುದರ ಜತೆಗೆ ಅಲ್ಲೇ ಅಡುಗೆ ಮಾಡಲಾಗುತ್ತಿದೆ.
ಈ ಹಿಂದೆ ಸರ್ಕಾರಿ ಶಾಲೆಯ ಕಟ್ಟಡವನ್ನು ಕೇಂದ್ರಕ್ಕೆ ಬಳಕೆ ಮಾಡಲಾಗುತ್ತಿತ್ತು. ಅದು ಸಂಪೂರ್ಣ ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ಮೂರು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ಪಕ್ಕದಲ್ಲೇ ಇದ್ದ ಅಡುಗೆ ಕೋಣೆಗೆ ಕೇಂದ್ರವನ್ನು ಸ್ಥಳಾಂತರಿಸಲಾಯಿತು. ಗ್ರಾಮದಲ್ಲಿ ಶೀಘ್ರ ಹೊಸ ಕಟ್ಟಡ ನಿರ್ಮಿಸಿ ಮಕ್ಕಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಈ ಹಿಂದೆ ಇದ್ದ ಸಿಡಿಪಿಒ ರಮ್ಯಾ ಮಕ್ಕಳನ್ನು ಸಣ್ಣ ಕೋಣೆಗೆ ಕಳುಹಿಸಿದರಾದರೂ, ಇಂದಿಗೂ ಸಹ ಮಕ್ಕಳು ಅದೇ ಅಡುಗೆ ಕೋಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದರೆ, ನೂತನ ಕಟ್ಟಡ ನಿಮಾರ್ಣವಾಗಲೇ ಇಲ್ಲ.
ಕೇಂದ್ರದಲ್ಲಿ 6 ತಿಂಗಳಿಂದ 3 ವರ್ಷದ 24 ಮಕ್ಕಳು, 3 ವರ್ಷದಿಂದ 6 ವರ್ಷದವರೆಗಿನ 10 ಮಕ್ಕಳು, 3 ಬಾಣಂತಿಯರು ಹಾಗೂ 2 ಗರ್ಭಿಣಿಯರು ದಾಖಲಾಗಿದ್ದು, ನಿತ್ಯ ಕೇಂದ್ರಕ್ಕೆ 3 ರಿಂದ 6 ವರ್ಷದವರೆಗಿನ 10 ಮಕ್ಕಳು ಹಾಜರಾಗುತ್ತಾರೆ. ಅಂಗನವಾಡಿ ಕೇಂದ್ರದ ಪೂರೈಕೆಯಾಗುವ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಸಣ್ಣದಾದ ಕೊಠಡಿಯಲ್ಲಿಯೇ ದಾಸ್ತಾನು ಮಾಡಿಕೊಂಡು ಅಲ್ಲೇ ಗ್ಯಾಸ್ ಸಿಲಿಂಡರ್ ಇಟ್ಟು ಅಡುಗೆ ಮಾಡಿ ಮಕ್ಕಳಿಗೆ ಉಣಬಡಿಸಲಾಗುತ್ತಿದೆ. ಮಕ್ಕಳು ಇಕ್ಕಟ್ಟಿನಲ್ಲಿಯೇ ಕುಳಿತು ಪಾಠಪ್ರವಚನ ಕೇಳುವ ದುಸ್ಥಿತಿ ನಿಮಾರ್ಣವಾಗಿದೆ. ಮಕ್ಕಳಿಗೆ ಆರೋಗ್ಯ ತಪಾಸಣೆ, ಲಸಿಕೆ ವಿತರಣೆಗೆ ಪಕ್ಕದ ದೇವಾಲಯದ ಪ್ರಾಂಗಣ ಬಳಕೆ ಮಾಡಲಾಗುತ್ತಿದೆ. ಗ್ರಾಮಸ್ಥರು ಮತ್ತು ಪಾಲಕರು ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸಲು ಕಳೆದ 3 ವರ್ಷಗಳಿಂದ ಬೇಡಿಕೆ ಇಡುತ್ತಿದ್ದರೂ ಸ್ಥಳಾವಕಾಶ ಹಾಗೂ ಇತರೆ ಕಾರಣಗಳಿಂದ ನೂತನ ಕಟ್ಟಡದ ಕನಸು ಸಾಕಾರಗೊಂಡಿಲ್ಲ.
ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸಲು ನರೇಗಾ ಯೋಜನೆಯ ಮೂಲಕ ಕ್ರಿಯಾ ಯೋಜನೆ ತಯಾರಿಸಿ 8 ಲಕ್ಷ ರೂ. ಅನುದಾನ ಮೀಸಲಿರಿಸಲಾಗಿದೆ. ನೂತನ ಕಟ್ಟಡಕ್ಕೆ ಸ್ಥಳಾವಕಾಶ ಕೊರತೆ ಇರುವುದರಿಂದ ಸ್ಥಳ ಗೊತ್ತುಪಡಿಸಿ, ಆದಷ್ಟು ಬೇಗ ಕಟ್ಟಡ ನಿರ್ಮಿಸಲಾಗುವುದು. | ಸೌಭಾಗ್ಯಮ್ಮ ಗ್ರಾಪಂ ಸದಸ್ಯೆ, ಹೊಸಕೋಟೆ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣ ಸರ್ಕಾರಿ ಶಾಲೆಯ ಕಟ್ಟಡ ಬಳಕೆ ಮಾಡಿಕೊಳ್ಳಲಾಗುತ್ತಿದೆ. ನರೇಗಾ ಯೋಜನೆಯಿಂದ 8 ಲಕ್ಷ ರೂ., ಇಲಾಖೆಯಿಂದ 5 ಲಕ್ಷ ಹಾಕಿ, 13 ಲಕ್ಷದಲ್ಲಿ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತದೆ. ನೂತನ ಕಟ್ಟಡ ನಿಮಾರ್ಣ ಕಾರ್ಯ ಪೂರ್ಣಗೊಳ್ಳುವ ತನಕ ಮಕ್ಕಳ ಹಿತದೃಷ್ಟಿಯಿಂದ ಬಾಡಿಗೆ ಕಟ್ಟಡ ಪಡೆದು ಅದರಲ್ಲಿ ಕೇಂದ್ರ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. | ಮುನಿರಾಜು ಸಿಡಿಪಿಒ