ಮೇವಿನ ಕೊರತೆಗೆ ಕಿಟ್ ಆಸರೆ

cross
cross
Published on

ಭರವಸೆ ಮೂಡಿಸಿದ ಮಳೆರಾಯ

52 ಸಾವಿರ ಮೇವಿನ ಕಿಟ್ ವಿತರಣೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಈ ಬಾರಿ ತೀವ್ರ ಮಳೆ ಕೊರತೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿರುವ ನಡುವೆಯೇ ಜಾನುವಾರುಗಳಿಗೆ ಮೇವಿನ ಕೊರತೆ ಕಾಡಬಹುದೆಂಬ ಆತಂಕ ಎದುರಾಗಿದ್ದು, ಸರ್ಕಾರ ಜಿಲ್ಲೆಯಾದ್ಯಂತ ವಿತರಿಸಿದ ಮೇವಿನ ಕಿಟ್ ಕೊರತೆ ನೀಗಿಸಲಿದೆ ಎಂದು ಪಶುಪಾಲನಾ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಶುಪಾಲನ ಇಲಾಖೆಯಿಂದ ಮೇವು ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೇವಿನ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಕೊಳೆವೆಬಾವಿ, ಕೃಷಿಹೊಂಡ ಸೇರಿ ಇನ್ನಿತರ ನೀರಿನ ಸೌಲಭ್ಯವಿರುವ ರೈತರಿಗೆ ಈಗಾಗಲೇ 52 ಸಾವಿರ ಮೇವಿನ ಕಿಟ್ ವಿತರಿಸಿದ್ದು, ಜಾನುವಾರುಗಳ ಮೇವಿನ ಕೊರತೆ ನೀಗಿಸುವಲ್ಲಿ ಇದು ಗಣನೀಯ ಪಾತ್ರವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜತೆಗೆ ಮತ್ತೆ 10 ಸಾವಿರ ಮೇವಿನ ಕಿಟ್ ವಿತರಿಸಲು ಇಲಾಖೆ ಸಿದ್ದತೆ ನಡೆಸಿದೆ. ಇದರ ನಡುವೆ ಕಳೆದೊಂದು ವಾರದಿಂದ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು, ಹಸಿರು ಮೇವಿಗೆ ತೀವ್ರ ಕೊರತೆ ಎದುರಾಗುವುದಿಲ್ಲ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.
35 ವಾರ ತೊಂದರೆ ಇಲ್ಲ: ಜಿಲ್ಲಾ ಪಶುಪಾಲನ ಇಲಾಖೆ ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಮೇವಿಗೆ ತೀವ್ರ ತೊಂದರೆ ಎದುರಾಗಿಲ್ಲ.ಮುಂದಿನ 35 ವಾರಗಳಿಗಾಗುಷ್ಟು ಮೇವಿನ ದಾಸ್ತಾನು ಇದೆ ಎಂದು ಇಲಾಖೆ ವರದಿ ನೀಡಿದೆ. ಇದಲ್ಲದೆ ಈ ಬಾರಿ ರಾಗಿ ಸಲು ನಷ್ಟವಾಗಿದ್ದರೂ ರಾಗಿ ಹುಲ್ಲಿನ ದಾಸ್ತಾನಿಗೆ ತೊಂದರೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ತೀವ್ರ ಕೊರತೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಮೇವಿಗೆ ಟೆಂಡರ್: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಮೇವಿನ ತೊಂದರೆ ಎದುರಾದರೆ ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆಗಳಿಂದ ಮೇವು ಖರೀದಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದ್ದು ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭಿಸಿದೆ ಎನ್ನಲಾಗಿದೆ. ಆದರೆ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಕಾದು ನೋಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಒಣ ಮೇವಿನ ಲಭ್ಯತೆ: ಕೃಷಿ ಇಲಾಖೆ ಮಾಹಿತಿಯಂತೆ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 56513 ಹೆಕ್ಟೇರ್ ರಾಗಿ, 6756 ಹೆಕ್ಟೇರ್ ಮುಸುಕಿನ ಜೋಳ ಹಾಗೂ 61 ಹೆಕ್ಟೇರ್ ಭತ್ತ ಬಿತ್ತನೆಯಾಗಿದ್ದು ರಾಗಿ ಬೆಳೆಯಿಂದಲೇ 190274 ಟನ್ ಒಣ ಮೇವು ಲಭ್ಯವಿದೆ ಎನ್ನಲಾಗಿದ್ದು ಜೂನ್ ಅಂತ್ಯದವರೆಗೆ ಒಣಮೇವಿನ ಕೊರತೆ ಎದುರಾಗುವುದರಿಲ್ಲ ಎಂಬ ಭರವಸೆ ಇಲಾಖೆಯದ್ದಾಗಿದೆ.

ಸುಳ್ಳು ಮಾಹಿತಿ ಬೇಡ: ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಮೇವಿನ ಕೊರತೆ ಎದುರಾದರೆ ತಕ್ಷಣ ಗಮನಕ್ಕೆ ತರುವಂತೆ ಪಶುಪಾಲನಾ ಇಲಾಖೆ ಮನವಿ ಮಾಡಿದೆ. ಆದರೆ ಕೆಲವು ಕಡೆಗಳಲ್ಲಿ ಸುಳ್ಳು ಮಾಹಿತಿ ನೀಡಿ ಸಿಬ್ಬಂದಿಯನ್ನು ಪರದಾಡಿಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಕೆಲವರ ಬಳಿ ಜಾನುವಾರುಗಳೆ ಇಲ್ಲದಿದ್ದರೂ ಮೇವಿಕೆ ಬೇಡಿಕೆ ಇಡುವುದು, ಒಂದೆರಡು ಜಾನುವಾರು ಇದ್ದರೆ ಏಳೆಂಟು ಜಾನುವಾರುಗಳಿಗೆ ಎಂದು ದಾರಿತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕ್ರಮಕೈಗೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ತೀವ್ರ ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ಹಸಿರು ಮೇವಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಆದರೆ ಜಿಲ್ಲಾ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದ್ದು ಇನ್ನೂ 35 ವಾರಗಳಿಗಾಗುವಷ್ಟು ಮೇವಿನ ದಾಸ್ತಾನು ಇದೆ. ಅಲ್ಲದೆ ಈಗಾಗಲೇ 52 ಸಾವಿರ ಮೇವಿನ ಕಿಟ್ ವಿತರಿಸಿರುವುದರಿಂದ ಮೇವಿಗೆ ತೀವ್ರ ಕೊರತೆ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಮೇವು ಖರೀದಿಗೆ ಟೆಂಡರ್ ಕರೆಯಲು ಸಿದ್ದತೆ ನಡೆಸಲಾಗಿದೆ.
ಡಾ. ಜಗದೀಶ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಬೆಂ.ಗ್ರಾಮಾಂತರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net