

ಮಧುಗಿರಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪ್ರತಿಯೊಂದು ಇಟ್ಟಿಗೆಯೂ ಭವ್ಯ ಭಾರತದ ಬುನಾದಿಯಾಗಿರಲಿದೆ ಎಂದು ಪಾವಗಡ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದಜೀ ಹೇಳಿದರು.
ಕುಂಚಿಟಿಗ ಒಕ್ಕಲಿಗರ ಸಮುದಾಯ ಭವನದ ಅವರಣದಲ್ಲಿ ಗುರುವಾರ ಶ್ರೀರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಷನ್ ಹಾಗೂ ಶ್ರೆ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಅಕ್ಷರ ದಾಸೋಹ ವಿಭಾಗದ 712 ಅಡುಗೆ ಸಿಬ್ಬಂದಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಮಂದಿರ ನಿರ್ಮಾಣ ಭಾವೈಕ್ಯತೆ ಮೂಡಲು ನಾಂದಿ ಹಾಡಿದೆ. ಕರೊನಾ ನಿಯಂತ್ರಣಕ್ಕೆ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಅಧಿಕಾರಿಗಳು ಸೇನಾನಿಗಳಂತೆ ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಕ್ಷ ಅಧಿಕಾರಿಗಳು ದೇಶದ ಅಪರಂಜಿಗಳು ಮತ್ತು ಅನನ್ಯ ರತ್ನಗಳು, ಅಂಥವರನ್ನು ಸರ್ಕಾರ ತಡವಾಗಿ ಗುರುತಿಸುತ್ತದೆ. ಸ್ವಯಂ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಕರೊನಾ ನಮ್ಮನ್ನು ಬಿಟ್ಟು ಹೋಗುತ್ತದೆ ಎಂದರು.
ಅನುದಾನರಹಿತ ಖಾಸಗಿ ಶಾಲೆಯ ಶಿಕ್ಷಕರ ಬದುಕು ಅತಂತ್ರ ಸ್ಥಿತಿ ತಲುಪಿದ್ದು, ಅಂಥಹವರಿಗೆ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ. ಅಡುಗೆ ಸಹಾಯಕರು ಶಾಲೆಯಲ್ಲಿನ ಮಕ್ಕಳನ್ನು ತಮ್ಮ ಮಕ್ಕಳಂತೆ ಉಪಚರಿಸಿ ದಾಸೋಹ ನೀಡುತ್ತಿದ್ದು, ಇಂದು ಅವರ ಬದುಕು ಸಂಕಷ್ಟದಲ್ಲಿರುವುದನ್ನು ಅರಿತು ತಾಲೂಕಿನ 712 ಅಕ್ಷರ ದಾಸೋಹ ಸಿಬ್ಬಂದಿಗೆ ಇನ್ಫೋಸಿಸ್ ನೆರವಿನಿಂದ ದಿನಸಿ ಕಿಟ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರಟಗೆರೆ ತಾಲೂಕಿನಲ್ಲಿಯೂ ವಿತರಿಸಲಾಗುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್, ಮಧುಗಿರಿಯಲ್ಲೂ ಶ್ರೀ ರಾಮಕೃಷ್ಣ ಸೇವಾಶ್ರಮದ ಶಾಖೆ ಪ್ರಾರಂಭಿಸುವಂತೆ ಮನವಿ ಮಾಡಿದರು. ಡಿವೈಎಸ್ಪಿ ಎಂ. ಪ್ರವೀಣ್, ಬಿಇಒ ರಂಗಪ್ಪ, ಸರ್ಕಾರಿ ನೌಕರರ ಸಂದ ಅಧ್ಯಕ್ಷ ವಿ.ಎಚ್. ವೆಂಕಟೇಶಯ್ಯ, ಕಾರ್ಯದರ್ಶಿ ನಟರಾಜು, ಬಿಆರ್‌ಸಿ ಅನಂದ್, ಅಕ್ಷರ ದಾಸೋಹದ ಅಧಿಕಾರಿಗಳಾದ ಪದ್ಮಾವತಮ್ಮ, ಕೆ.ಎನ್.ಹನುಮಂತರಾಯ, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಮಂಗಳಮ್ಮ, ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ಎಚ್.ಆರ್. ಶಶಿಕುಮಾರ್, ಎಸ್. ಉಮಾಶಂಕರ್, ಇಸಿಒಗಳಾದ ಜಯರಾಮ್, ಅಶ್ವತ್ ನಾರಾಯಣ್ ಹಾಜರಿದ್ದರು.