

ಸಂಡೂರು: ಶೈಕ್ಷಣಿಕ ಧನಸಹಾಯ ಸೇರಿ ಅನೇಕ ಸೌಲಭ್ಯಗಳು ಕಟ್ಟಡ ಕಾರ್ಮಿಕರಿಗೆ ಮೂರು ವರ್ಷಗಳಿಂದ ಸಿಗುತ್ತಿಲ್ಲ. ಕಾರ್ಮಿಕ ಮಂತ್ರಿಗಳು ಬೋಗಸ್ ಕಾರ್ಡ್ ತಡೆಯುವ ನೆಪ ಹೇಳಿ ನೈಜ ಕಾರ್ಮಿಕರಿಗೆ ಸೌಲಭ್ಯ ಒದಗಿಸದೆ ಅನ್ಯಾಯಮಾಡುತ್ತಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಸತ್ಯಬಾಬು ಆರೋಪಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನ ಕುರೇಕುಪ್ಪ ಘಟಕದ ಸಮಾವೇಶ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ವೈದ್ಯಕೀಯ ಶಿಕ್ಷಣ, ಮದುವೆ, ಪಿಂಚಣಿ ಸೌಲಭ್ಯಗಳನ್ನು ನೀಡಲಾಗದೆ ಅನಗತ್ಯ ಕಿಟ್‌ಗಳ ಖರೀದಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕು ಅಧ್ಯಕ್ಷ ವಿ.ದೇವಣ್ಣ ಮಾತನಾಡಿ 1,996 ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರ ಸುದೀರ್ಘ ಹೋರಾಟದಿಂದ ರಚನೆಯಾಗಿದೆ. ಆದರೆ ಸರ್ಕಾರಗಳು ಬದಲಾದ ಹಾಗೆ ಕಟ್ಟಡ ಕಾರ್ಮಿಕರ ಮಂಡಳಿಗಳನ್ನು ತೆಗೆದು ಹಾಕಬೇಕೆಂದು ಹುನ್ನಾರ ನಡೆಸುತ್ತಿದ್ದಾರೆ ಎಂದರು.
ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯಸ್ವಾಮಿ ಮಾತನಾಡಿ ರೇಷನ್ ಕಿಟ್ ಔಷಧ ಕಿಟ್ ಸಾಮಾಗ್ರಿಗಳ ಕಿಟ್ ಹೆಸರಿನಲ್ಲಿ ಕೋಟ್ಯಾಂತರ ರೂ. ಲೂಟಿ ಮಾಡುತ್ತಿದ್ದಾರೆ. ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರ ಕಾರ್ಡ್ ನವೀಕರಣ ಸರಿಯಾಗಿ ಆಗುತ್ತಿಲ್ಲ. ಹೊಸ ಕಾರ್ಡ್ ನೀಡುತ್ತಿಲ್ಲ. ಕಾರ್ಮಿಕ ಮಂತ್ರಿಗಳು ಕಾರ್ಮಿಕರ ಪರ ಕೆಲಸ ಮಾಡುತ್ತಿಲ್ಲ. ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು.
ಕುರೇಕುಪ್ಪ ಪುರಸಭೆ ಅಧ್ಯಕ್ಷ ಕೆ.ಕಲ್ಲಗುಡೆಪ್ಪ, ಪ್ರಮುಕರಾಧ ಕೆ.ದೇವಣ್ಣ, ದೊಡ್ಡಬಸಪ್ಪ, ಕೆ.ಸತ್ಯಣ್ಣ, ಹಾಲೇಶ್, ನರಸಿಂಗಪ್ಪ ಆಚಾರಿ, ಎಚ್.ತಾಯಪ್ಪ, ಹಾಲಪ್ಪ, ಕರಿಬಸಮ್ಮ, ಸಣ್ಣಸ್ವಾಮಿ, ಎನ್.ಹುಲಿಯಪ,್ಪ ವಿ.ಜಾನು, ವಿ.ಲಕ್ಷ್ಮೀ, ಖಜಾಂಚಿ ಎನ್.ಅಂಬರೀಶ ಇತರರಿದ್ದರು. ದರೋಜಿ, ತೋರಣಗಲ್ ಘಟಕದ ಅಧ್ಯಕ್ಷರು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.