

ಉಡುಪಿ: ಸಂಸ್ಕೃತಿ ಪ್ರಸಾರಕ್ಕೆ ಯಕ್ಷಗಾನ ಅತ್ಯುತ್ತಮ ಮಾಧ್ಯಮವಾಗಿದ್ದು, ನೀತಿ ಶಿಕ್ಷಣ ನೀಡುವ ಸಾಮರ್ಥ್ಯ ಈ ಕಲೆಗೆ ಇದೆ ಎಂದು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.
ಬುಧವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಎರಡುವಾರಗಳ ಪರ್ಯಂತ ನಡೆದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಯಕ್ಷಗಾನ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತದೆ. ಹೀಗಾಗಿ ಭಾವೀ ಜನಾಂಗವನ್ನು ಉತ್ತಮ ರೀತಿಯಲ್ಲಿ ತಯಾರುಗೊಳಿಸುವ ಪರಿಕಲ್ಪನೆ ಶ್ಲಾನೀಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಎ. ಸುವರ್ಣ, ಶುದ್ಧ ಸಂಕಲ್ಪದಿಂದ ಆರಂಭಗೊಂಡ ಯಕ್ಷಶಿಕ್ಷಣ ಅಭಿಯಾನವನ್ನು ಮುನ್ನಡೆಸುವುದು ನಮ್ಮ ಜವಾಬ್ದಾರಿ ಎಂದರು. ಅಂಬಲಪಾಡಿ ದೇವಸ್ಥಾನ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈದರು. ಅಭ್ಯಾಗತರಾಗಿ ಉದ್ಯಮಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಡಿಡಿಪಿಐ ಕೆ. ಗಣಪತಿ, ಉದ್ಯಮಿ ಯು. ವಿಶ್ವನಾಥ ಶೆಣೈ , ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್. ವಿ. ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಶಿಕ್ಷಣದ ಗುರುಗಳನ್ನು , ಪ್ರಸಾದನ ತಜ್ಞರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಗೌರವಿಸಿದರು. ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ವಿತರಿಸಲಾಯಿತು. ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಎಚ್. ಎನ್. ಶೃಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.