

ಉಡುಪಿ: ಕರಾವಳಿ ಕರ್ನಾಟಕದ ಮಣ್ಣಿನ ಕಲೆ ಯಕ್ಷಗಾನದಲ್ಲಿ ಕುಣಿತ, ಹಾಡುಗಾರಿಕೆ, ಸಂಭಾಷಣೆ ಸಹಿತ ಎಲ್ಲ ರೀತಿಯ ದೈಹಿಕ ಹಾಗೂ ಮಾನಸಿಕ ಮನರಂಜನೆಯೊಂದಿಗೆ ಬೌದ್ಧಿಕ ವಿಕಸನಕ್ಕೆ ಪೂರಕ ಅಂಶಗಳಿವೆ ಎಂದು ಯಕ್ಷಶಿಕ್ಷಣ ಟ್ರಸ್ಟ್ ನ ಗೌರವಾಧ್ಯಕ್ಷ, ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.
ಗುರುವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ, ಯಕ್ಷಗಾನ ಕಲಾರಂಗ, ಯಕ್ಷಶಿಕ್ಷಣ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಡೆದ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೆ ನೈತಿಕ ಶಿಕ್ಷಣ ಕೊಡುವುದು ಕರ್ತವ್ಯ. ಟಿವಿ ಪ್ರದರ್ಶನಗಳು ನೈತಿಕ ಶಿಕ್ಷಣ ನೀಡುವುದಿಲ್ಲ. ಜಾತ್ಯತಿತ ಸರ್ಕಾರಗಳಿಗೆ ಇಂಥ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಂ ಸಂಸ್ಥೆಗಳು ಸೇರಿಕೊಂಡು ಮಕ್ಕಳಿಗೆ ಈ ರೀತಿಯ ಕಲಾ ಪ್ರಕಾರಗಳನ್ನು ಹೇಳಿಕೊಡುವುದು ಅತೀ ಅಗತ್ಯ ಎಂದು ಹೇಳಿದರು.
ಸ್ಥಾಪಕ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿ ಪ್ರಾರಂಭವಾದ ಯಕ್ಷಶಿಕ್ಷಣ ಟ್ರಸ್ಟ್ ಈವರೆಗೆ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದೆ. ಈ ವರ್ಷ ಸುಮಾರು 3000 ವಿದ್ಯಾರ್ಥಿಗಳು ಯಕ್ಷಗಾನ ಅಭ್ಯಾಸ ಮಾಡಿದ್ದಾರೆ. ಮಕ್ಕಳು ಯಕ್ಷಗಾನ ಅಭ್ಯಾಸ ಮಾಡುವುದರಿಂದ ಸಭಾಕಂಪನ ಹೋಗಿ ಆತ್ಮವಿಶ್ವಾಸ ಬೆಳೆಯುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಂಗಳೂರಿನ ಉದ್ಯಮಿ ಗೋಕುಲನಾಥ ಪ್ರಭು, ಡಾ.ಜೆ.ಎನ್,ಭಟ್, ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್, ಉಪಾಧ್ಯಕ್ಷ ಎಸ್.ವಿ.ಭಟ್ ಮತ್ತು ವಿ.ಜೆ.ಶೆಟ್ಟಿ ಭಾಗವಹಿಸಿದ್ದರು.
ನಿರ್ದೇಶಕ ನಾರಾಯಣ ಹೆಗಡೆ ನಿರೂಪಿಸಿ, ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.