

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಬಿಜೆಪಿ ಹಳೇ ನಾಯಕರನ್ನು ಕೈಬಿಟ್ಟು ಹೊಸ ಮುಖವನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿಯ ನಿರ್ಣಯ ಕೈಗೊಂಡಿದೆ. ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ , ಆರ್‌ಎಸ್‌ಎಸ್ ಕಟ್ಟಾಳು ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಟಿಕೆಟ್ ಒಲಿದಿದೆ.
ದ.ಕ.ಸ್ಥಳೀಯಾಡಳಿತ ಕ್ಷೇತ್ರವನ್ನು ವಿಧಾನ ಪರಿಷತ್‌ನಲ್ಲಿ ಪ್ರತಿನಿಧಿಸುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಚುನಾಯಿತರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಅ.21ರಂದು ಉಪ ಚುನಾವಣೆ ನಿಗದಿಯಾಗಿದೆ. ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಹಿತ ಕೆಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಬಿಜೆಪಿ ಕೇಂದ್ರೀಯ ಸಮಿತಿ ಹೊಸಮುಖ ಕಿಶೋರ್ ಕುಮಾರ್ ಅವರಿಗೆ ಅವಕಾಶ ಕಲ್ಪಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡ ಕಾರಣ ಬಿಜೆಪಿಗೆ ಜಿಲ್ಲೆಯಲ್ಲಿ ಒಂದು ಶಾಸಕ ಸ್ಥಾನ ನಷ್ಟವಾಗಿತ್ತು. ಈಗ ಅದೇ ಕ್ಷೇತ್ರದ ಯುವ ನಾಯಕ , ಒಬಿಸಿ ಸಮುದಾಯದ ಕಿಶೋರ್ ಕುಮಾರ್ ಅವರಿಗೆ ಎಂಎಲ್‌ಸಿ ಚುನಾವಣೆ ಟಿಕೆಟ್ ನೀಡಿರುವುದು ಇಲ್ಲಿ ಗಮನಾರ್ಹ .
*ಹಿಂದುತ್ವದ ಧ್ವನಿ
ಟಿಕೆಟ್ ಘೋಷಣೆಯಾದ ಬಳಿಕ ಕಿಶೋರ್ ಕುಮಾರ್ ಅವರು ಮಂಗಳವಾರ ಸಾಯಂಕಾಲ ದ.ಕ.ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದರು. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.
ಈ ಸಂದರ್ಭ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ‘ ಪಕ್ಷ ಸಂಘಟನೆಗಾಗಿ ದುಡಿದ ಯುವಕ ಕಿಶೋರ್ ಕುಮಾರ್ ಅವರು ಅಭ್ಯರ್ಥಿ ಸ್ಥಾನಕ್ಕೆ ಅರ್ಹ ಆಯ್ಕೆಯಾಗಿದ್ದಾರೆ. ಹಿಂದುತ್ವದ ಧ್ವನಿಯಾಗಿ ಹೋರಾಟದ ಹಾದಿಯಲ್ಲಿ ಸಾಗಿ ಬಂದ ಕಿಶೋರ್ ಕುಮಾರ್ ಭವಿಷ್ಯದಲ್ಲಿ
ವಿಧಾನ ಪರಿಷತ್ ಸದಸ್ಯನಾಗಿ ಜಿಲ್ಲೆಯ ಜನತೆಗೆ ಸೇವೆ ನೀಡಲಿದ್ದಾರೆ.
ಶಾಸಕ ಡಾ.ವೈ.ಭರತ್ ಶೆಟ್ಟಿ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕಿಶೋರ್ ಕುಮಾರ್ ಅವರನ್ನು ಅಭಿನಂದಿಸಿ ನಾಳೆಯಿಂದಲೇ ಪಕ್ಷದ ಪ್ರಚಾರ ಕಾರ್ಯ ಶುರುವಾಗಲಿದೆ ಎಂದರು.
ಪಕ್ಷ ತಾಯಿಗೆ ಸಮಾನ :
ಬಿಜೆಪಿಯನ್ನು ತಾಯಿ ಎಂದು ಸ್ವೀಕರಿಸಿ ಕೆಲಸ ಮಾಡಿಕೊಂಡು ಬಂದ ನನಗೆ ಪಕ್ಷದ ಹಿರಿಯರು ಚುನಾವಣೆ ಸ್ಪರ್ಧಿಸುವ ಅವಕಾಶ ನೀಡಿದ್ದಾರೆ. ಸವಿತಾ ಸಮಾಜದಂತಹ ಸಣ್ಣ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿರುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ನನ್ನ ತಂದೆ ಜನಸಂಘದ ಕಾಲದಿಂದಲೂ ಪಕ್ಷದ ಕೆಲಸ ಮಾಡುತ್ತಾ ಬಂದವರು. ಈಗ ಪಕ್ಷ ನನ್ನನ್ನು ಗುರುತಿಸಿ ದೊಡ್ಡ ಜವಾಬ್ದಾರಿ ನೀಡಿದೆ. ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಮಾರ್ಗದರ್ಶನದಲ್ಲಿ, ಕಾರ್ಯಕರ್ತರ ಧ್ವನಿಯಾಗಿ, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಪರವಾಗಿ ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಕಿಶೋರ್ ಕುಮಾರ್ ಪುತ್ತೂರು ಹೇಳಿದರು.