

ಕಾರಟಗಿ: ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಕಿಷ್ಕಿಂಧಾ(ಗಂಗಾವತಿ) ಜಿಲ್ಲಾ ಹೋರಾಟ ಸಮಿತಿ ಮಂಗಳವಾರ ಹಮ್ಮಿಕೊಂಡಿದ್ದ ಪಟ್ಟಣದ ಪ್ರಮುಖರ ಮೊದಲ ಸಭೆಯಲ್ಲಿ ಜಿಲ್ಲೆ ಹೋರಾಟಕ್ಕೆ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಶಿವಾರೆಡ್ಡಿ ಹಾಗೂ ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಪ್ರಹ್ಲಾದ್ ಜೋಷಿ ಮಾತನಾಡಿ, ಸಿಂಧನೂರು ಜಿಲ್ಲೆಯಾಗಬೇಕೆಂಬ ನೀಲಿನಕ್ಷೆಯಲ್ಲಿ ಕಾರಟಗಿಯನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ, ಅಲ್ಲಿನ ಹೋರಾಟ ಸಮಿತಿ ಇದುವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಕಾರಟಗಿ ಗಂಗಾವತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದುವ ಜತೆಗೆ ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ನಂಟಿದೆ ಎಂದರು.
ಹೋರಾಟ ಸಮಿತಿಯವರು ಕಾರಟಗಿ ತಾಲೂಕಿನ ಎಲ್ಲ ಜಾತಿ, ಧರ್ಮದ ಹಿರಿಯರು, ಸಂಘ-ಸಂಸ್ಥೆಗಳು, ಜಾತಿವಾರು ಸಂಘಗಳು, ಶಿಕ್ಷಣ ಸಂಸ್ಥೆಗಳು ಸೇರಿ ಪಕ್ಷಾತೀತವಾಗಿ ಎಲ್ಲರನ್ನೂ ಒಳಗೊಂಡು ಹೋರಾಟ ರೂಪಿಸಬೇಕು. ಕಿಷ್ಕಿಂಧಾ ಜಿಲ್ಲೆ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಇದಕ್ಕೆ ಹಿರೇಮಠದ ಮರುಳಸಿದ್ದಯ್ಯಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಜಿ.ನಾಗರೆಡ್ಡೆಪ್ಪ, ನಾಯಕ, ಜಾಗೃತ ಯುವಕ ಸಂಘದ ಅಧ್ಯಕ್ಷ ತಾಯಪ್ಪ ಕೋಟ್ಯಾಳ, ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಗದ್ದೆಪ್ಪ ನಾಯಕ, ವಾಣಿಜ್ಯೋದ್ಯಮಿ ಪಿ.ಗೋವಿಂದಪ್ಪ ಶ್ರೇಷ್ಠಿ, ಪ್ರಮುಖರಾದ ಶರಣಪ್ಪ ದಿವಟರ್, ನಾಗರಾಜ ಬಿಲ್ಗಾರ್, ಬೂದಿ ಗಿರಿಯಪ್ಪ ಸಮ್ಮತಿಸಿದರು.
ಹೋರಾಟ ಸಮಿತಿ ಸಂಚಾಲಕ ಸಂತೋಷ ಕೆಲೋಜಿ ಪ್ರತಿಕ್ರಿಯಿಸಿ, ಈಗಾಗಲೇ ಮೊದಲ ಹಂತದಲ್ಲಿ ಗಂಗಾವತಿ, ಕನಕಗಿರಿ, ಕಂಪ್ಲಿ ಕ್ಷೇತ್ರಗಳ ಹಾಲಿ, ಮಾಜಿ ಶಾಸಕರು ಹಾಗೂ ಸಂಸದರು, ಹಿರಿಯ ಧುರೀಣರನ್ನು ಸಂಪರ್ಕಿಸಿದ್ದೇವೆ. ಎಲ್ಲರೂ ಪೂರಕವಾಗಿ ಸ್ಪಂದಿಸಿದ್ದಾರೆ. ಎಲ್ಲ ಹಿರಿಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದೊಂದಿಗೆ ಹಂತ-ಹಂತವಾಗಿ ಹೋರಾಟ ರೂಪಿಸಲಾಗುವುದು. ತಮ್ಮೆಲ್ಲರ ಸಹಕಾರ ಅಗತ್ಯವಾಗಿದ್ದು, ಕಿಷ್ಕಿಂಧಾ ಜಿಲ್ಲೆಯಾಗುವುದರಿಂದ ಭವಿಷ್ಯದಲ್ಲಿ ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪ್ರಮುಖರಾದ ಬಸವರಾಜ ಪಗಡದಿನ್ನಿ, ಪ್ರಭು ಉಪನಾಳ, ಸಂದೀಪ್‌ಗೌಡ, ಅನಿಲ್ ಪಾಟೀಲ್, ಪ್ರದೀಪ್ ಕೋಲ್ಕಾರ್, ರವಿ ದ್ಯಾಮಗೌಡರ್ ಇತರರಿದ್ದರು.