

ಗುರುಮಠಕಲ್: ಕರೊನಾ ವೈರಸ್ ನಮ್ಮ ಭಾಗಕ್ಕೆ ಬಂದಿಲ್ಲ ಎಂಬ ನಿರ್ಲಕ್ಷತನ ವಹಿಸದೆ ಪ್ರತಿಯೊಬ್ಬರೂ ಮನೆಯಲ್ಲಿರುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಖ್ಯಾತ ವೈದ್ಯ ಡಾ. ಧೀರಜ್ ಕೆ. ಕುಲಕರ್ಣಿ ಸಲಹೆ ನೀಡಿದರು.
ತಾಲೂಕಿನ ಚಂಡರಕಿ ಗ್ರಾಮದಲ್ಲಿ ಕರೊನಾ ವಾರಿಯರ್ಸ್ಗಳಾದ ಆಶಾ, ಅಂಗನವಾಡಿ, ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಗೌರವ ಸಲ್ಲಿಸಿದ ನಂತರ ಪ್ರಧಾನಮಂತ್ರಿ ನಿಧಿಗೆ 10 ಲಕ್ಷ ರೂ. ದೇಣಿಗೆ ಸಲ್ಲಿಸಿ ಮಾತನಾಡಿದ ಅವರು, ಸೇವೆಯಂದರೆ ಕೇವಲ ಹಣ ನೀಡುವುದು ಮಾತ್ರವಲ್ಲ, ನಾವೆಲ್ಲರೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವ ಮೂಲಕ ನಮ್ಮ ಮನೆ, ಗ್ರಾಮ ಹಾಗೂ ರಾಷ್ಟ್ರವನ್ನು ಕೊರೊನಾ ಪಿಡುಗಿನಿಂದ ರಕ್ಷಿಸಿಕೊಳ್ಳುವುದು ನಿಜವಾದ ಸೇವೆ ಎಂದರು.
ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಕರೊನಾ ಹೊಡೆತದಿಂದ ತತ್ತರಿಸಿ ಕೈಚೆಲ್ಲಿ ಕುಳಿತಿವೆ. ಇಂತಹ ಸಮಯದಲ್ಲಿ ನಮ್ಮ ದೇಶದಲ್ಲಿನ ಪರಿಸ್ಥಿತಿ ಸದ್ಯಕ್ಕೆ ಆಮಟ್ಟಿಗೆ ತೀವ್ರತರವಾದ ಸಮಸ್ಯೆಗೆ ಸಿಲುಕಿಲ್ಲವಾದರೂ, ನಮ್ಮ ಅತಿಯಾದ ನಂಬಿಕೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ದಯಮಾಡಿ ಎಲ್ಲರೂ ಜಾಗರೂಕರಾಗಿರಿ ಎಂದು ಮನವಿ ಮಾಡಿದರು.
ಕಿಶನರಾವ್ ಕುಲಕರ್ಣಿ, ವಿಜಯಲಕ್ಮೀ ಕುಲಕರ್ಣಿ, ಡಾ.ಹರಣಿ ಧೀರಜ್ಕುಲಕರ್ಣಿ,, ಬಸವರಾಜಪ್ಪ ದಳಪತಿ, ರಾಜಾ ರಮೇಶ ಗೌಡ್, ಪಿಡಿಒ ಭೀಮರಾಯ, ತಾ.ಪಂ. ಸದಸ್ಯ ನಾಗೇಂದ್ರಪ್ಪ, ಗ್ರಾ.ಪಂ. ಸದಸ್ಯರು ಹಾಗೂ ಪ್ರಮುಖರು ಹಾಜರಿದ್ದರು.