

ಮಂಡ್ಯ: ವಿ.ಸಿ.ಫಾಮ್‌ನಲ್ಲಿರುವ ಕೃಷಿ ಕಾಲೇಜನ್ನು ಸಮಗ್ರ ಕೃಷಿ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆರಿಸುವ ಯೋಜನೆಗಿರುವ ಅಡೆತಡೆಗಳನ್ನು ಮೆಟ್ಟಿನಿಂತು ಶೀಘ್ರವಾಗಿ ಸಮಗ್ರ ಕೃಷಿ ವಿಶ್ವವಿದ್ಯಾಲಯವನ್ನು ಆರಂಭಿಸಲು ಮುಂದಾಗಬೇಕು ಎಂದು ಕದಂಬ ಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್ ಹಾಗೂ ಭಾರತೀಯ ಕಿಸಾನ್ ಸಂಘದ ಪ್ರಾಂತೀಯ ಅಧ್ಯಕ್ಷ ರಮೇಶ್‌ರಾಜು ಒತ್ತಾಯಿಸಿದರು.
ಕೃಷಿ ವಿವಿ ಪ್ರಾರಂಭ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವಾಗತಿಸಿದರೆ, ಎಚ್.ಡಿ.ರೇವಣ್ಣ ವಿರೋಧಿಸಿ ರಾಜ್ಯಪಾಲರಿಗೆ ಪತ್ರ ಬರೆದು ಅಡ್ಡಗಾಲು ಹಾಕಿದ್ದಾರೆ. ಎಚ್‌ಡಿಕೆಗ ರಾಜಕೀಯ ಪುನರ್‌ಜನ್ಮ ನೀಡಿ ಕೇಂದ್ರ ಸಚಿವ ಸ್ಥಾನ ನೀಡಿರುವ ಮಂಡ್ಯ ಜಿಲ್ಲೆಯ ಜನರಿಗೆ ದ್ರೋಹ ಮಾಡಬೇಡಿ. ಕೃಷಿ ವಿವಿ ಸಂಬಂಧ ಹಾಸನ ಕೃಷಿ ಕಾಲೇಜನ್ನು ಬೆಂಗಳೂರಿನ ಜಿಕೆವಿಕೆಯಲ್ಲಿಯೇ ಮುಂದುವರೆಸಲು ಒತ್ತಾಯಿಸಿ ರೇವಣ್ಣ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆದರೆ ಹಳೆ ಮೈಸೂರು ಭಾಗದಲ್ಲಿ ನಿರ್ಮಿಸಲಾಗುತ್ತಿರುವ ಕೃಷಿ ವಿವಿ ಸ್ಥಾಪನೆಗೆ ಅಡ್ಡಗಾಲು ಹಾಕದಂತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಹಳೆ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಭೌಗೋಳಿಕವಾಗಿ ಒಂದೇ ರೀತಿಯ ವಾತಾವರಣ ಹೊಂದಿದೆ. ಮಾತ್ರವಲ್ಲದೆ ಶೇ.85ರಷ್ಟು ಜನ ಕೃಷಿಯನ್ನೇ ಅವಲಂಭಿಸಿದ್ದಾರೆ. ಇಲ್ಲಿನ ಅನುಕೂಲಕ್ಕೆ ತಕ್ಕತೆ ಮಂಡ್ಯ ಕೃಷಿ ವಿವಿಯಲ್ಲಿ ಸಂಶೋಧನೆ ನಡೆಸಿ, ಸಮಗ್ರ ಕೃಷಿಯನ್ನು ಇಲ್ಲಿನ ರೈತರು ಅಳವಡಿಸಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದ ವಿ.ಸಿ.ಫಾರ್ಮ್‌ನಲ್ಲಿ ಕೃಷಿ ವಿವಿಗೆ ಬೇಕಾದ ಎಲ್ಲ ಸವಲತ್ತುಗಳಿದ್ದು, ಐದು ಜಿಲ್ಲೆಗಳ ಕೇಂದ್ರೀತ ಸಮಗ್ರ ಕೃಷಿಗೆ ಅನುಕೂಲಕರ ಹಾಗೂ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಹಾಸನ, ಚಾಮರಾಜನಗರದ ಕೃಷಿ ಕಾಲೇಜುಗಳಿಗೆ ಹೆಚ್ಚಿನ ಅನುದಾನ ನಿಡಿ ಉನ್ನತ ದರ್ಜೆಗೆ ಏರಿಸುವುದರ ಜತೆಗೆ ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಸಹಕೃಷಿ ಕಾಲೇಜು ಆರಂಭಿಸಬೇಕಿದೆ. ಮಂಡ್ಯದಲ್ಲಿ ಸಮಗ್ರ ಕೃಷಿ ವಿವಿ ಸ್ಥಾಪನೆಗೆ ಅಡ್ಡಿಯಾಗುವ ರೀತಿಯಲ್ಲಿ ಹಾಸನ ಕೃಷಿ ಕಾಲೇಜನ್ನು ಜಿಕೆವಿಕೆ ಅಡಿಯಲ್ಲಿ ಮುಂದುವರೆಸಲು ಸಂಬಂಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಾಸನ ಜಿಲ್ಲೆಯ ರಾಜಕಾರಣಿಗಳು ಸಲ್ಲಿಸುವ ಮನವಿಯನ್ನು ಕೂಡಲೇ ಹಿಂಪಡೆಯಬೇಕು. ಮಂಡ್ಯ ಜಿಲ್ಲೆ ಜೆಡಿಎಸ್ ಪಕ್ಷಕ್ಕೆ ಆಸರೆಯಾಗಿರುವುದಲ್ಲದೇ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜಕೀಯ ಶಕ್ತಿ ತುಂಬಿತ್ತು ಎಂಬುದನ್ನು ಮರೆಯಬಾರದೆಂದು ತಾಕೀತು ಮಾಡಿದರು.
ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಂಡ್ಯದಲ್ಲಿ ಸಮಗ್ರ ಕೃಷಿ ವಿವಿ ಅತಿಶೀಘ್ರವಾಗಿ ಆರಂಭಿಸಲು ಕೈಜೋಡಿಸುವಂತೆ ಹಾಗೂ ರಾಜ್ಯಪಾಲರು ಶೀಘ್ರವಾಗಿ ಅನುಮತಿ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘ, ಕರವೇ(ಪ್ರವೀಣ್ ಶೆಟ್ಟಿ ಬಣ), ಕದಂಬ ಸೈನ್ಯ ಸಂಘಟನೆಗಳ ಪರವಾಗಿ ಮನವಿ ಮಾಡುವುದಾಗಿ ಹೇಳಿದರು.
ಕದಂಬ ಸೈನ್ಯ ಜಿಲ್ಲಾಧ್ಯಕ್ಷ ಜೋಸೆಫ್ ರಾಮು, ಉಪಾಧ್ಯಕ್ಷ ಸಲ್ಮಾನ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ, ಪ್ರಮುಖ್ ಕಲ್ಲೇಶ್, ಸ್ವಾಮಿ, ಜಯರಾಮು, ಕರವೇ ರಾಮಣ್ಣ ಇದ್ದರು.