

ಮಂಡ್ಯ: ಸಕಾಲದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯದೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಟೀಕಿಸಿದರು.
ಕಳೆದ ವರ್ಷ ಮುಂಚಿತವಾಗಿ ಸರ್ಕಾರ ಖರೀದಿ ಕೇಂದ್ರ ತೆರೆದಿದ್ದರು. ಆಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಭತ್ತಕ್ಕೆ 3 ಸಾವಿರ ರೂ. ನಿಂದ 3,200 ರೂ.ವರೆಗೆ ಇತ್ತು. ಈ ವರ್ಷ ಭತ್ತದ ಖರೀದಿ ಕೇಂದ್ರವನ್ನು ಸರ್ಕಾರ ಇನ್ನೂ ತೆರೆಯದಿರುವುದರಿಂದ ಭತ್ತದ ಬೆಲೆ ಪ್ರತಿ ಕ್ವಿಂಟಾಲ್‌ಗೆ 1 ಸಾವಿರ ರೂ ಕಡಿಮೆಯಾಗಿದೆ. ಇದರಿಂದ ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂ.ಗೂ ಹೆಚ್ಚು ನಷ್ಟವಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರ ಭತ್ತದ ಖರೀದಿ ಕೇಂದ್ರ ತೆರೆಯದಿರುವುದೇ ರೈತರ ನಷ್ಟಕ್ಕೆ ಕಾರಣವಾಗಿದೆ. ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಇಲ್ಲವೆಂದು ಕಳೆದ ಬಾರಿ ಬೊಬ್ಬೆ ಹಾಕಿತ್ತು. ಹಾಗಾಗಿ ಫಲಾನುಭವಿಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದ್ದರೂ ಅದನ್ನೂ ಸರಿಯಾಗಿ ಕೊಡುತ್ತಿಲ್ಲ. ಕೃಷಿ ಸಮ್ಮಾನ್ ಯೋಜನೆಯಿಂದ ಸಣ್ಣಪುಟ್ಟ ಕೃಷಿ ಚಟುವಟಿಕೆಗೆ ರೈತರಿಗೆ ಸಹಾಯವಾಗಿದ್ದ 4 ಸಾವಿರ ರೂಗಳನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಾಲು ಉತ್ಪಾದಕರಿಗೆ 2 ರೂ.ವರೆಗೆ ಕಡಿಮೆ ಮಾಡಿದೆ. ವಿದ್ಯುತ್ ಸಂಪರ್ಕದ ಅಕ್ರಮ-ಸಕ್ರಮ ಯೋಜನೆ ಸ್ಥಗಿತಗೊಳಿಸಿದ್ದಾರೆ. ರೈತ ವಿದ್ಯಾರ್ಥಿ ನಿಧಿಯನ್ನು ಬಂದ್ ಮಾಡಿ ಶಿಕ್ಷಣದಿಂದ ವಂಚಿತರನ್ನಾಗಿಸಿದೆ. ಆರ್‌ಟಿಸಿ, ಎಂ.ಆರ್., ಇ-ಸ್ಟ್ಯಾಂಪ್ ಹಾಗೂ ಸಮುದಾಯ ಇಲಾಖೆಯ ಇತರೆ ಶುಲ್ಕಗಳನ್ನು ದುಬಾರಿ ಮಾಡಿ ರೈತರಿಗೆ ಹೊರೆಯಾಗುವಂತೆ ಮಾಡಿದೆ. ಇಷ್ಟೆಲ್ಲ ಅನ್ಯಾಯವಾಗುತ್ತಿದ್ದರೂ ಜಿಲ್ಲೆಯವರೇ ಆದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸುಮ್ಮನಿರುವುದು ದುರಂತ ಎಂದು ಆರೋಪಿಸಿದರು.
ಸಂಘದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ, ಉಪಾಧ್ಯಕ್ಷ ಅಚ್ಯುತ್, ಜಿಲ್ಲಾ ಮಹಿಳಾ ಪ್ರಮುಖ್ ಇಂದಿರಮ್ಮ ಹಾಜರಿದ್ದರು.