

ಮಂಡ್ಯ: ಉತ್ಪಾದನಾ ವೆಚ್ಚ ಆಧರಿಸಿ ಹಾಲಿಗೆ ವೈಜ್ಞಾನಿಕ ದರ ನಿಗದಿ ಮತ್ತು ಸಾಲಮನ್ನಾ ಮೊತ್ತ ಬಿಡುಗಡೆಗೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಡಿಸಿ ಕಚೇರಿ ಸಹಾಯಕ ಅಧಿಕಾರಿ ಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿ ಲೀಟರ್ ಹಾಲು ಉತ್ಪಾದನೆಗಾಗಿ ರೈತರಿಗೆ 70 ರೂ.ವೆಚ್ಚವಾಗುತ್ತದೆ. ಆದರೆ, ರೈತರಿಂದ 29ರೂ.ಗೆ ಖರೀದಿಸುವ ಮನ್‌ಮುಲ್, ಅದನ್ನು 40 ರೂ.ನಿಂದ 44 ರೂ.ವರೆಗೆ ಮಾರಾಟ ಮಾಡುತ್ತಿದೆ. ಹಾಲು ಉತ್ಪಾದಕರ ಸಹಕಾರ ಸಂಘದಿಂದ ಖರೀದಿಸಿದ ಮೊತ್ತಕ್ಕಿಂತ 11 ರೂ.ನಿಂದ 15 ರೂ.ವರೆಗೆ ಹೆಚ್ಚಿನ ಲಾಭಕ್ಕೆ ಮಾರುಕಟ್ಟೆಗೆ ಪೂರೈಸುತ್ತಿದೆ. ಹಾಲಿನ ಸಂಗ್ರಹಣೆ, ಸಾಗಣೆ, ಸಂಸ್ಕರಣೆ, ಆಡಳಿತ ನಿರ್ವಹಣೆ, ರಿಟೇಲ್ ಮಾರಾಟಗಾರರ ಕಮಿಷನ್ ಸೇರಿದಂತೆ ವಿವಿಧ ವೆಚ್ಚಗಳನ್ನು ಕಳೆದು ಮನ್‌ಮುಲ್‌ಗೆ ಆರೇಳು ರೂ. ಉಳಿತಾಯವಾಗುತ್ತದೆ. ಹೀಗಿರುವಾಗ ಕೇವಲ 29 ರೂ. ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮನ್‌ಮುಲ್ ಹಾಗೂ ಇತರ ಹಾಲು ಒಕ್ಕೂಟಗಳು ಉತ್ಪಾದಿಸುವ ಉಪ ಉತ್ಪನ್ನಗಳ ಲಾಭಾಂಶವನ್ನು ಇದರಲ್ಲಿ ಲೆಕ್ಕ ಹಾಕಿಲ್ಲ. ಅದನ್ನೂ ಸೇರಿದಂತೆ ಒಕ್ಕೂಟಕ್ಕೆ ಹೆಚ್ಚಿನ ಲಾಭವಿದೆ. ಉತ್ಪಾದಕ ರೈತರ ಹಿತದೃಷ್ಟಿಯಿಂದ ಉತ್ಪಾದನಾ ವೆಚ್ಚಕ್ಕೆ ಪೂರಕವಾಗಿ ಹಾಲಿನ ದರ ನಿಗದಿಪಡಿಸಬೇಕು. ಇನ್ನು 2018 ಆ.14ರ ಆದೇಶದಂತೆ 2018ರ ಜುಲೈ 10ರವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರ ಸಂಘಗಳಿಂದ ರೈತರ ಹೊರಬಾಕಿ ಸಾಲಗಳಿಗೆ ಗರಿಷ್ಠ 1 ಲಕ್ಷ ರೂ.ವರೆಗೆ ಸಾಲ ಮನ್ನಾ ಮಾಡಲಾಯಿತು. ಆದರೆ, ಸಾಲಮನ್ನಾ ಯೋಜನೆ ಘೋಷಣೆಯಾಗಿ 4 ವರ್ಷ ಕಳೆದರೂ ರಾಜ್ಯದಲ್ಲಿ ಇನ್ನೂ 40 ಸಾವಿರ ರೈತರಿಗೆ ಸಾಲಮನ್ನಾ ಸೌಲಭ್ಯ ದೊರಕಿಲ್ಲ. ಜಿಲ್ಲೆಯಲ್ಲೇ 5 ಸಾವಿರ ರೈತರಿದ್ದಾರೆ. ಅರ್ಹ ರೈತರೆಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಇನ್ನೂ ಸಾಲ ಮನ್ನಾ ಆಗಿಲ್ಲ. ಸಾವಿರಾರು ರೈತರು ಸಾಲ ಮನ್ನಾ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ಮೊತ್ತದ ಬಾಕಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್‌ರಾಜು, ರಾಷ್ಟ್ರೀಯ ಕಾರ್ಯದರ್ಶಿ ವೀಣಾ ಸತೀಶ್, ಪ್ರಾಂತ ಉಪಾಧ್ಯಕ್ಷ ಪಿ.ಎಲ್.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಪಣಕನಹಳ್ಳಿ ವೆಂಕಟೇಶ್, ಜಿಲ್ಲಾಧ್ಯಕ್ಷ ಯಲಿಯೂರು ಆನಂದ್ ಇತರರಿದ್ದರು.